ಮಹಾರಾಷ್ಟ್ರ ಚುನಾವಣೆ: ಬಿಜೆಪಿ, ಮಿತ್ರ ಪಕ್ಷ ಗೆಲುವಿನ ಹಾದಿ "ಆರ್‌ಎಸ್‌ಎಸ್"ನಿಂದ ಸುಲಭ ?
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಸವಾಲಿನಿಂದ ಕೂಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಿತ್ರಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಯನ್ನು ನೀಡುತ್ತಿವೆ. 288 ವಿಧಾನಸಭಾ ಕ್ಷೇತ್ರಗಳಿರುವ ಈ ರಾಜ್ಯದ ಮ್ಯಾಜಿಕ್ ನಂಬರ್ 145. ಆದರೆ, ಈ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮತ್ತೊಂದು ಹೊಸ ಮ್ಯಾಜಿಕ್ ಮಾಡಲು ಬಿಜೆಪಿಗೆ ಆರ್‌ಎಸ್‌ಎಸ್ ಸಾಥ್ ನೀಡುತ್ತಿದೆ.
ಈಚೆಗೆ ಇನ್ನೇನು ಬಿಜೆಪಿ ಸೋತೆ ಹೋಯಿತು ಎನ್ನುವ ಹಂತದಲ್ಲಿದ್ದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಹಾಯ ಮಾಡಿದ್ದೇ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಾಸಂಘ). ಇದೀಗ ಮಹಾರಾಷ್ಟ್ರದಲ್ಲೂ ಆರ್‌ಎಸ್‌ಎಸ್ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಸಣ್ಣ ಬಿರುಕೊಂದು ಕಾಣಿಸಿಕೊಂಡಿತ್ತು. ಮೋದಿ ಅವರ ಕೆಲವು ಏಕಮುಖ ನಿರ್ಧಾರಗಳನ್ನು ಆರ್‌ಎಸ್‌ಎಸ್ ವಿರೋಧಿಸಿತ್ತು. ಈ ಬಿರುಕಿಗೆ ಲೋಕಸಭೆ ಚುನಾವಣೆ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಗಳು ಸಾಕ್ಷಿಯಾಗಿದ್ದವು.

ಬಿಜೆಪಿಯಿಂದ ಆರ್‌ಎಸ್‌ಎಸ್ ಸಣ್ಣದೊಂದು ಅಂತರ ಕಾಪಾಡಿಕೊಂಡಿದ್ದರಿಂದಲೇ ಕರ್ನಾಟಕದಲ್ಲಿ ಹಾಗೂ 2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸೀಟುಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದೀಗ ಪರಿಸ್ಥಿತಿ ಭಿನ್ನವಾಗಿದೆ. ಹರಿಯಾಣದಲ್ಲಿ ಬಿಜೆಪಿ ಸೋಲಲಿದೆ ಎಂದೇ ರಾಜಕೀಯ ತಜ್ಞರು ಹಾಗೂ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಆದರೆ, ಆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿ, ಹರಿಯಾಣದಲ್ಲಿ ಮೂರನೇ ಬಾರಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಮಾಸ್ಟರ್‌ಪ್ಲಾನ್: ಇದೀಗ ಹರಿಯಾಣ ಅಖಾಡಕ್ಕೆ ಇಳಿದಿರುವ ಆರ್‌ಎಸ್‌ಎಸ್ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಗೆಲುವಿಗೆ ಪ್ಲಾನ್ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಇದೀಗ ಈ ಸಮ್ಮಿಶ್ರ ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಆರ್‌ಎಸ್‌ಎಸ್ ಮುಂದಾಗಿದ್ದು, ಭಾರೀ ಪ್ರಚಾರ ಕೆಲಸಗಳನ್ನು ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಸಂದರ್ಭಗಳಲ್ಲಿ, ಜನಾಭಿಪ್ರಾಯ ಸಂಗ್ರಹಕ್ಕೆ ಹಾಗೂ ಬಿಜೆಪಿ ಬೆಂಬಲಕ್ಕೆ ಆರ್‌ಎಸ್‌ಎಸ್ ಬಂದೇ ಬರುತ್ತದೆ. ಕೇವಲ ಈ ವಿಷಯಗಳಿಗೆ ಮಾತ್ರವಲ್ಲ ಸ್ವಯಂ ಸೇವೆಯಲ್ಲೂ ಆರ್‌ಎಸ್‌ಎಸ್ ಮುಂದಿದೆ. ಇನ್ನು ಇದೀಗ ಆರ್‌ಎಸ್‌ಎಸ್ ಹಾಗೂ ಅದರ ಅಂಗ ಸಂಸ್ಥೆಗಳು ತಂಡಗಳಾಗಿ ಜನರ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.
5ರಿಂದ 10 ಜನರ ತಂಡಗಳನ್ನು ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ಸ್ಥಳೀಯರ ಮೂಲಕ ಮತದಾರರನ್ನು ತಲುಪಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಸೇರುವ ಸಭೆಗಳಲ್ಲಿ ನೇರವಾಗಿ ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿಲ್ಲ. ರಾಷ್ಟ್ರೀಯ ಹಿತಾಸಕ್ತಿ, ಹಿಂದುತ್ವ, ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ವಿಷಯಗಳನ್ನು ಜನರೊಂದಿಗೆ ಚರ್ಚೆ ಮಾಡಿ ಅಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 2019ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ, ಬಿಜೆಪಿಯಿಂದ ಯಾರೂ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಲಿಲ್ಲ. ದೇವೇಂದ್ರ ಫಡ್ನವಿಸ್ ಇದೀಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ ಹಾಗೂ ಮಿತ್ರಪಕ್ಷದಿಂದ ಚುನಾವಣೆ ಅಭ್ಯರ್ಥಿಯನ್ನು ಘೋಷಿಸಿಲ್ಲ.












Click it and Unblock the Notifications