Maharashtra Assembly Elections 2024: 15 ದಿನದಲ್ಲಿ ಮಾದರಿ ನೀತಿ ಸಂಹಿತೆ ಜಾರಿ
ಮುಂಬೈ, ಸೆಪ್ಟೆಂಬರ್ 19: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಚುನಾವಣೆ ಎದುರಿಸಲು ತಯಾರಿ ಕೈಗೊಂಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂಪುಟದ ಸಚಿವರೊಬ್ಬರು ಈಗ ಚುನಾವಣೆ ದಿನಾಂಕದ ಕುರಿತು ಸುಳಿವು ನೀಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರ, ಹರ್ಯಾಣ ರಾಜ್ಯದ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯದ ಚುನಾವಣೆಯ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಚುನಾವಣಾ ದಿನಾಂಕದ ಕುರಿತು ಚರ್ಚೆಗಳು ಆರಂಭವಾಗಿದೆ.

ಬಿಜೆಪಿ ನಾಯಕ, ಏಕನಾಥ್ ಶಿಂಧೆ ಸಂಪುಟದ ಸಚಿವ ಗಿರೀಶ್ ಮಹಾಜನ್ ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕದ ಕುರಿತು ಸುಳಿವು ನೀಡಿದ್ದಾರೆ. "15-20 ದಿನದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ" ಎಂದು ಹೇಳಿದ್ದಾರೆ.
ಸದ್ಯ ಮಹಾರಾಷ್ಟ್ರಾ ರಾಜ್ಯದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಆಡಳಿತ ನಡೆಸುತ್ತಿದೆ. ನವೆಂಬರ್ ಅಂತ್ಯಕ್ಕೆ ಸರ್ಕಾರದ ಅವಧಿ ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕು.
ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದ ತಕ್ಷಣ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿತ ಬರುತ್ತದೆ. 15-20 ದಿನದಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಸಚಿವ ಗಿರೀಶ್ ಮಹಾಜನ್ ಹೇಳಿದ್ದು, ಈಗ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಹ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟಕ್ಕೆ ಎದುರಾಳಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ಇದರಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿವೆ.
ಈ ಬಾರಿಯ ಚುನಾವಣೆಯನ್ನು ಸಹ ಎರಡು ಮೈತ್ರಿಕೂಟಗಳು ಒಟ್ಟಾಗಿ ಎದುರಿಸಲಿವೆ. ಇದಕ್ಕಾಗಿ ಈಗಾಗಲೇ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಲೋಕಸಭೆ ಚುನಾವಣೆ 2024ರಲ್ಲಿ ರಾಜ್ಯದಲ್ಲಿ 'ಮಹಾವಿಕಾಸ್ ಅಘಾಡಿ' ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ. ಆದ್ದರಿಂದ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ನಾಯಕ ಏಕನಾಥ್ ಶಿಂಧೆ ಸಹ ಚುನಾವಣೆ ತಯಾರಿ ಆರಂಭಿಸಿದ್ದು, ಪಕ್ಷದೊಳಗಿನ ಅಸಮಾಧಾನ ಬಗೆಹರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸಚಿವ ಸ್ಥಾನ ಕೈತಪ್ಪಿದ್ದ ಹಿರಿಯ ನಾಯಕರಿಗೆ ನಿಗಮ-ಮಂಡಳಿಗಳ ಪ್ರಮುಖ ಹುದ್ದೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಬಿಜೆಪಿ 140-150 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.












Click it and Unblock the Notifications