Maharashtra Assembly Elections 2024: ಮಹಾರಾಷ್ಟ್ರ ಚುನಾವಣೆ, ರಾಜ್ ಠಾಕ್ರೆ ಒತ್ತಾಯವೇನು?
ಮುಂಬೈ, ಸೆಪ್ಟೆಂಬರ್ 22: ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ಯಾವಾಗ?. ಈ ಕುರಿತು ದೇಶಾದ್ಯಂತ ಕುತೂಹಲವಿದೆ. ನವೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಈಗಾಗಲೇ ಮಹಾರಾಷ್ಟ್ರ ರಾಜ್ಯ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ತಯಾರಿಗಳನ್ನು ಕೈಗೊಂಡಿವೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಈಗ ಚುನಾವಣೆಯ ಕುರಿತು ಮಾತನಾಡಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಈ ಕುರಿತು ಮಾತನಾಡಿ, "ಒಂದು ರಾಜ್ಯ ಒಂದು ಚುನಾವಣೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಷ್ಟು ಕಾಳಜಿ ಇದ್ದರೆ ಮೊದಲು ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಿ" ಎಂದು ಹೇಳಿದರು.

"ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಾಕಿ ಇದೆ. ಚುನಾವಣೆಗೆ ಅಷ್ಟು ಮಹತ್ವನ್ನು ನೀಡುವುದಾದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಿ" ಎಂದು ರಾಜ್ ಠಾಕ್ರೆ ಒತ್ತಾಯಿಸಿದರು.
ವಿಧಾನಸಭೆ ಚುನಾವಣೆ: "ಅಕ್ಟೋಬರ್ ತಿಂಗಳು ಬಂದರೆ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳು ಆಡಳಿತಾಧಿಕಾರಿಗಳಿಂದ ನಡೆಯುತ್ತಾ 4 ವರ್ಷಗಳು ಕಳೆಯುತ್ತಾ ಬಂದಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ, ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುವ ನೀವು ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ" ಎಂದು ಆಗ್ರಹಿಸಿದರು.
"ಒಂದು ದೇಶ ಒಂದು ಚುನಾವಣೆ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ತೀರ್ಮಾನ ಕೈಗೊಳ್ಳುವ ಮೊದಲು ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರುಗಳ ಅಭಿಪ್ರಾಯವನ್ನು ಸಂಗ್ರಹ ಮಾಡಬೇಕು. ಇದರಿಂದ ಹಲವು ರಾಜ್ಯಗಳ ವಿಧಾನಸಭೆ ಅವಧಿಗೂ ಮೊದಲೇ ಮುಕ್ತಾಯವಾಗುತ್ತದೆ. ಲೋಕಸಭೆಗೆ ಸಹ ಚುನಾವಣೆ ನಡೆಯಬೇಕಾಗುತ್ತದೆ" ಎಂದು ರಾಜ್ ಠಾಕ್ರೆ ಹೇಳಿದರು.
ಸದ್ಯ ಹರ್ಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇವು ಮುಗಿದ ಬಳಿಕ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಮಹಾರಾಷ್ಟ್ರದಲ್ಲಿ ಸದ್ಯ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ನವೆಂಬರ್ ಅಂತ್ಯಕ್ಕೆ ಸರ್ಕಾರದ ಅವಧಿ ಪೂರ್ಣಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.
ರಾಜ್ಯದಲ್ಲಿ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ.
ನವೆಂಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಬಹುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಚಿವರು ಈಗಾಗಲೇ ಸುಳಿವು ನೀಡಿದ್ದಾರೆ. ಎರಡು ಹಂತದಲ್ಲಿ ಚುನಾವಣೆ ನಡೆದರೆ ಸೂಕ್ತ ಎಂದು ವಿವಿಧ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಏಕನಾಥ್ ಶಿಂಧೆ ಚುನಾವಣೆ ತಯಾರಿ ಆರಂಭಿಸಿದ್ದು ತಮ್ಮ ಪಕ್ಷದ ಪ್ರಮುಖ ನಾಯಕರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿ, ಅಸಮಾಧಾನ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ವಿಧಾನಸಭೆ ಚುನಾವಣೆ ನಡೆಸುವ ಕುರಿತು ಕೇಂದ್ರ ಚುನಾವಣಾ ಆಯೋಗವು ತಯಾರಿ ಆರಂಭಿಸಿದೆ. ರಾಜ್ಯದ ಚುನಾವಣಾ ಆಯೋಗದ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದೆ. ಮುಂಬೈ ನಗರದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ.












Click it and Unblock the Notifications