Maharashtra Assembly Election 2024: ಮಹಾರಾಷ್ಟ್ರದಲ್ಲಿ ಮೈತ್ರಿ, ಬಿಜೆಪಿಗೆ ಎಷ್ಟು ಸೀಟು?
ಮುಂಬೈ, ಸೆಪ್ಟೆಂಬರ್ 11: ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 288 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಬಿಜೆಪಿ 'ಮಹಾಯುತಿ' ಮೈತ್ರಿಕೂಟದ ಭಾಗವಾಗಿ ಎದುರಿಸಲಿದೆ. ಈಗಾಗಲೇ ರಾಜ್ಯದಲ್ಲಿ ಮೈತ್ರಿಕೂಟದ ಸೀಟು ಹಂಚಿಕೆ ಲೆಕ್ಕಾಚಾರಗಳು ಆರಂಭವಾಗಿದೆ. ಎನ್‌ಡಿಎ ಮೈತ್ರಿಕೂಟದ ನೇತೃತ್ವವಹಿಸಿರುವ ಬಿಜೆಪಿಗೆ ಸಿಗುವ ಸೀಟುಗಳು ಎಷ್ಟು? ಎಂಬುದು ಸದ್ಯದ ಪ್ರಶ್ನೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಇತರ ಸಣ್ಣಪುಟ್ಟ ಪಕ್ಷಗಳು ಸೇರಿ 'ಮಹಾಯುತಿ' ಮೈತ್ರಿಕೂಟ ರಚನೆಯಾಗಲಿದೆ. ಈಗಾಗಲೇ ರಾಜ್ಯದಲ್ಲಿ ಮೈತ್ರಿಕೂಟವೇ ಆಡಳಿತ ನಡೆಸುತ್ತಿದ್ದು, ಏಕನಾಥ್ ಶಿಂಧೆ ಮುಖ್ಯಮಂತ್ರಿ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಗಳು.

ಮೈತ್ರಿಕೂಟದ ಸೀಟು ಹಂಚಿಕೆ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ 'ಮಹಾಯತಿ' ಮೈತ್ರಿಕೂಟ ಸಿದ್ಧವಾಗುತ್ತಿದೆ. ಸೀಟು ಹಂಚಿಕೆಯ ಚರ್ಚೆಗಳು ರಾಜ್ಯದಲ್ಲಿ ಆರಂಭವಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಬಿಜೆಪಿ 140 ರಿಂದ 150 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಸೀಟುಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 55 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. ಚಿಕ್ಕಪುಟ್ಟ ಪಕ್ಷಗಳು ಮೈತ್ರಿಕೂಟಕ್ಕೆ ಸೇರುವ ಆಯ್ಕೆಯನ್ನು ತೆರೆದಿಡಲಾಗಿದೆ ಮತ್ತು 3 ಸೀಟುಗಳನ್ನು ಅವುಗಳಿಗಾಗಿ ಮೀಸಲಿಡಲಾಗಿದೆ.
ಮಹಾರಾಷ್ಟ್ರದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಇನ್ನೂ ಸೀಟು ಹಂಚಿಕೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಮೈತ್ರಿಕೂಟ ಇನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚೆಯಲ್ಲಿ ತೊಡಗಿವೆ.
ಸದ್ಯ ಕೇಂದ್ರ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರ, ಹರ್ಯಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಮತದಾನ ಮುಗಿದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ ಅಥವ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ನಡೆಯುವ ನಿರೀಕ್ಷೆ ಇದೆ.
ಈಗಾಗಲೇ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುರಿತು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿವೆ. ಸಮೀಕ್ಷೆಗಳಲ್ಲಿ 'ಮಹಾಯತಿ' ಮೈತ್ರಿಕೂಟ ಹಿನ್ನಡೆಯಾಗಲಿದೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ ಎಂದು ವರದಿಗಳು ಬಂದಿವೆ.
ಲೋಕಸಭೆ ಚುನಾವಣೆ 2024ರಲ್ಲಿ ಮಹಾರಾಷ್ಟ್ರದಲ್ಲಿ 'ಮಹಾಯತಿ' ಮೈತ್ರಿಕೂಟಕ್ಕೆ ಹಿನ್ನಡೆಯಾಗಿತ್ತು. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 23 ಸ್ಥಾನಗಳಿಸಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕೇವಲ 9 ಸ್ಥಾನದಲ್ಲಿ ಜಯಗಳಿಸಿತ್ತು. ಇದರಿಂದಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಲು ಮುಂದಾಗಿದ್ದರು.
"ನನ್ನ ಮುಂದಿನ ಗುರಿ ವಿಧಾನಸಭೆ ಚುನಾವಣೆಯಾಗಿದೆ. ಲೋಕಸಭೆ ಚುನಾವಣೆ ಸೋಲಿನ ಹೊಣೆ ನಾನೇ ಹೊರುತ್ತೇನೆ. ನನ್ನನ್ನು ಸರ್ಕಾರದ ಕರ್ತವ್ಯದಿಂದ ಬಿಡುಗಡೆ ಮಾಡಿ, ಪಕ್ಷ ಸಂಘಟನೆಯತ್ತ ನಾನು ಗಮನ ಹರಿಸುವೆ" ಎಂದು ದೇವೇಂದ್ರ ಫಡ್ನವೀಸ್ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದರು. ಆದರೆ ಅಮಿತ್ ಶಾ ಜೊತೆಗಿನ ಸಭೆ ಬಳಿಕ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದರು.












Click it and Unblock the Notifications