Maharashtra Assembly Election 2024: ಮುಖ್ಯಮಂತ್ರಿ ಹುದ್ದೆಗೆ ಯಾರು ಬೆಸ್ಟ್?
ಮುಂಬೈ, ನವೆಂಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತದಾನ ಮುಕ್ತಾಯಗೊಂಡಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ರಾಜ್ಯದಲ್ಲಿ ಶೇ 65.1 ರಷ್ಟು ಮತದಾನವಾಗಿದ್ದು, ಯಾರಿಗೆ ಸಹಾಯಕವಾಗಲಿದೆ? ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ. ಸರ್ಕಾರ ರಚನೆಗೆ ಅಗತ್ಯ ಇರುವ ಮ್ಯಾಜಿಕ್ ನಂಬರ್ 145.
ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಕುರಿತು Axis My India ಚುನಾವಣೋತ್ತರ ಸಮೀಕ್ಷೆ ಮಾಡಿದೆ. ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಾರು ಬೆಸ್ಟ್? ಎಂದು ಜನರನ್ನು ಕೇಳಿದೆ. ಜನರು ತಮ್ಮ ಅಭಿಪ್ರಾಯವನ್ನು ದಾಖಲು ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಘೋಷಣೆ ಮಾಡದೇ ಚುನಾವಣೆ ಎದುರಿಸಿದೆ.
ಕಾಂಗ್ರೆಸ್ ನೇತೃತ್ವದ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಸಹ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಾಜ್ಯದ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮಹಾಯತಿ ಮೈತ್ರಿಕೂಟ 178-200 ಸೀಟು, ಎಂವಿಎ 82-102 ಸೀಟು, ವಿಬಿಎ-0 ಸೀಟು ಮತ್ತು ಇತರರು 6-12 ಸೀಟುಗಳಲ್ಲಿ ಜಯಗಳಿಸಲಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಯಾರು?: Axis My India ಚುನಾವಣೋತ್ತರ ಸಮೀಕ್ಷೆಯಲ್ಲಿ ಏಕನಾಥ್ ಶಿಂಧೆ ಸಿಎಂ ಹುದ್ದೆಗೆ ಬೆಸ್ಟ್ ಎಂದು ಶೇ 31, ದೇವೇಂದ್ರ ಫಡ್ನವೀಸ್ ಪರ ಶೇ 12, ನಿತಿನ್ ಗಡ್ಕರಿ ಪರ ಶೇ 2, ಅಜಿತ್ ಪವಾರ್ ಪರ ಶೇ 2, ಬಿಜೆಪಿಯಿಂದ ಯಾರಾದರೂ ಆಗಲಿ ಎಂದು ಶೇ 5ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ವಿರೋಧ ಪಕ್ಷಗಳ ಪೈಕಿ ಉದ್ಧವ್ ಠಾಕ್ರೆ ಪರ ಶೇ 18, ಶರದ್ ಪವಾರ್ ಪರ ಶೇ 5, ನಾನಾ ಪಟೋಲೆ ಪರ ಶೇ 2, ಪೃಥ್ವಿರಾಜ್ ಚೌವ್ಹಾಣ್ ಪರ ಶೇ 1, ಜಯಂತ್ ಪಾಟೀಲ್ ಪರ ಶೇ 1, ಕಾಂಗ್ರೆಸ್‌ನ ಯಾವುದೇ ಅಭ್ಯರ್ಥಿ ಎಂದು ಶೇ 10ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕಾಶ್ ಅಂಬೇಡ್ಕರ್ ಪರ ಶೇ 3, ರಾಜ್ ಠಾಕ್ರೆ ಪರ ಶೇ 2ರಷ್ಟು, ಇತರರು/ ಗೊತ್ತಿಲ್ಲ ಎಂದು ಶೇ 6ರಷ್ಟು ಜನರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಾಲಿ ಸಿಎಂ ಏಕನಾಥ್ ಶಿಂಧೆ, ಅದಕ್ಕೂ ಮೊದಲು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. 2014-2019ರ ತನಕ ಬಿಜೆಪಿಯ ದೇವೇಂದ್ರ ಫಡ್ನವೀಸ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.
ಕಾಂಗ್ರೆಸ್ ನೇತೃತ್ವದ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಚುನಾವಣೆಗೂ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಚುನಾವಣೆ ಎದುರಿಸಲಾಗಿದೆ.
ಬಿಜೆಪಿ ನೇತೃತ್ವದ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿಯೂ ಚುನಾವಣೆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ ಎಂದು ಘೋಷಿಸಲಾಗಿದೆ.












Click it and Unblock the Notifications