Maharashtra Assembly Election 2024: ಬಂಡಾಯ, ಸೀಟು ಹಂಚಿಕೆ ಮಹಾರಾಷ್ಟ್ರ ಚುನಾವಣೆ ಕುತೂಹಲ
ಮುಂಬೈ, ಅಕ್ಟೋಬರ್ 31: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. 288 ಸದಸ್ಯ ಬದಲ ವಿಧಾನಸಭೆಗೆ ಒಟ್ಟು 10,905 ನಾಮಪತ್ರಗಳು ಸಲ್ಲಿಕೆಯಾಗಿವೆ. ನವೆಂಬರ್ 4 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಎರಡು ಮೈತ್ರಿಕೂಟ ಮೂರು ಪ್ರಮುಖ ಪಕ್ಷಗಳ ಕಾರಣಕ್ಕೆ ವಿಧಾನಸಭೆ ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 30ರಂದು ನಡೆದಿದ್ದು, ಅಭ್ಯರ್ಥಿಗಳು ನವೆಂಬರ್ 4ರ ತನಕ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.
ಬಂಡಾಯ, ಸೀಟು ಹಂಚಿಕೆ ಕುತೂಹಲ: ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಮಹಾಯುತಿ ಮೈತ್ರಿಕೂಟದಲ್ಲಿ ಅಷ್ಟು ಗೊಂದಲಗಳಿಲ್ಲ. ಆದರೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು? ಎಂಬುದೇ ಅಂತಿಮವಾಗಿಲ್ಲ. ಟಿಕೆಟ್ ಸಿಗದ ಅಭ್ಯರ್ಥಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದರೂ ಸಹ 15 ಸೀಟುಗಳಿಗೆ ಅಭ್ಯರ್ಥಿಗಳು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರೆ ಸೀಟು ಹಂಚಿಕೆ ಸುಗಮವಾಗಲಿದೆ. ಇಲ್ಲವಾದಲ್ಲಿ ಗೊಂದಲ ಮತದಾನದ ತನಕವೂ ಮುಂದುವರೆಯಲಿದೆ.
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 152, ಶಿವಸೇನೆ (ಏಕನಾಥ್ ಶಿಂಧೆ ಬಣ) 81, ಎನ್‌ಸಿಪಿ (ಅಜಿತ್ ಪವಾರ್ ಬಣ) 84 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 288 ಸೀಟುಗಳಲ್ಲಿ 287 ಸೀಟುಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಲ್ಲದೇ ಕೆಲವು ಕ್ಷೇತ್ರಗಳಲ್ಲಿ ಈ ಮೈತ್ರಕೂಟ ಬೆಂಬಲಿಸಿರುವ ಚಿಕ್ಕಪುಟ್ಟ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ 8 ಸೀಟುಗಳನ್ನು ಚಿಕ್ಕಪುಟ್ಟ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ 102, ಶಿವಸೇನೆ 92 ಮತ್ತು ಎನ್‌ಸಿಪಿ 87 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಲವು ನಾಯಕರು ಟಿಕೆಟ್ ಸಿಗದಿದ್ದಾಗ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೋರಿವಾಲಿ, ಅಂಧೇರಿ ಕ್ಷೇತ್ರದಲ್ಲಿ ಈ ಮಾದರಿಯ ಬಂಡಾಯದ ಬಿಸಿ ರಾಷ್ಟ್ರೀ ಪಕ್ಷಗಳಿಗೆ ತಟ್ಟಿದೆ. ಆದ್ದರಿಂದ ಯಾರು ನಾಮಪತ್ರ ವಾಪಸ್ ಪಡೆಯಲಿದ್ದಾರೆ? ಎಂಬುದು ಕುತೂಹಲ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಮಹಾರಾಷ್ಟ್ರ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದರಲ್ಲೂ ಹರಿಯಾಣದಲ್ಲಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಮಹಾರಾಷ್ಟ್ರದಲ್ಲಿಯೂ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. ಆದರೆ ಎರಡೂ ಪಕ್ಷಗಳು ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿಲ್ಲ.












Click it and Unblock the Notifications