Maharashtra Assembly Election 2024: ಕಾಂಗ್ರೆಸ್, ಎನ್‌ಸಿಪಿ ಪ್ಲಾನ್‌ಗೆ ಬಿಜೆಪಿ ಕಂಗಾಲು!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ಮಿತ್ರಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮಹಾರಾಷ್ಟ್ರಗೆ ಭೇಟಿ ನೀಡಿದ್ದಾರೆ. ಮಿತ್ರ ಪಕ್ಷಗಳಾದ ಶಿವಸೇನಾ (ಉದ್ಧವಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್ ಪವರ್ ಬಣ)ದೊಂದಿಗೆ ಚರ್ಚೆ ನಡೆಸಿದ್ದಾರೆ. ಈಚೆಗೆ ನಡೆದಿದ್ದ ಲೋಕಸಭೆ ಚುನಾಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಉತ್ತಮ ಸಾಧನೆ ಮಾಡಿದ್ದವು. ಅದನ್ನೇ ಮುಂದುವರಿಸಲು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಮುಂದಾಗಿವೆ.
ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ (ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನಾ) ಉತ್ತಮ ಸಾಧನೆ ಮಾಡಿದ್ದವು. ಅದೇ ಮಾದರಿ ಹಾಗೂ ತಂತ್ರವನ್ನು ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಣೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಒಂದು ತಿಂಗಳಲ್ಲಿ ಎರಡು ಬಾರಿ ಮಹಾರಾಷ್ಟ್ರಗೆ ಭೇಟಿ ನೀಡಿದ್ದು, ಮಿತ್ರ ಪಕ್ಷಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮತ್ತೊಂದು ಕಡೆ ಎನ್‌ಸಿಪಿಯ ನಾಯಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಶರದ್ ಪವಾರ್ ಅವರು ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ.

ಅಕ್ಟೋಬರ್ 4 ಮತ್ತು 5ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆಯುವ ಸಭೆ - ಸಮಾರಂಭದಲ್ಲಿ ರಾಹುಲ್‌ಗಾಂಧಿಯವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಪಶ್ಚಿಮ ಮಹಾರಾಷ್ಟ್ರವು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಪ್ರಮುಖವಾಗಿದೆ. ಈ ಭಾಗದ ಆರು ಜಿಲ್ಲೆಗಳಲ್ಲಿ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ.
ಈ ಭಾಗದ ಸತಾರಾ, ಪುಣೆ,ಅಹಮದ್‌ನಗರ, ಸೊಲ್ಲಾಪುರ, ಸಂಗಾಲಿ ಹಾಗೂ ಕೊಲ್ಲಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಮಹಾರಾಷ್ಟ್ರ ಪಶ್ಚಿಮ ಭಾಗದಲ್ಲಿ 70 ವಿಧಾನಸಭಾ ಕ್ಷೇತ್ರಗಳಿವೆ. 2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಸೇರಿ ಒಟ್ಟು 39 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಎನ್‌ಸಿಪಿ 27 ಕ್ಷೇತ್ರಗಳಲ್ಲಿ ಗೆದಿದ್ದರೆ, ಕಾಂಗ್ರೆಸ್‌ಗೆ 12 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಾಗಿತ್ತು.

ಪರಿಸ್ಥಿತಿ ಭಿನ್ನವಾಗಿದೆ: ಈ ಬಾರಿ ಮಹಾರಾಷ್ಟ್ರದಲ್ಲಿ ಎಲ್ಲ ಪಕ್ಷಗಳಿಗೂ ಸವಾಲಿನ ಪರಿಸ್ಥಿತಿ ಇದೆ. ಹೀಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷಗಳಲ್ಲಿ ವಿಭಜನೆ ಇರಲಿಲ್ಲ. ಚುನಾವಣೆಯ ನಂತರ ಎರಡೂ ಪಕ್ಷಗಳು ಇಬ್ಭಾಗವಾಗಿವೆ.
ಒಂದು ಬಣ ಆಡಳಿತರೂಢ ಪಕ್ಷದಲ್ಲಿದ್ದರೆ ಮತ್ತೊಂದು ಬಣ ವಿರೋಧ ಪಕ್ಷದಲ್ಲಿದೆ. ಶಿವಸೇನಾದ (ಉದ್ಧವ ಠಾಕ್ರೆ ಬಣ) ಹಾಗೂ ಎನ್‌ಸಿಪಿಯ (ಶರದ್ ಪವಾರ್) ಪಕ್ಷ ವಿರೋಧ ಪಕ್ಷದ ಬಣದಲ್ಲಿ ಇದ್ದರೆ, ಆಡಳಿತ ರೂಢವಾಗಿ ಶಿವಸೇನಾದ (ಏಕನಾಥ್ ಶಿಂಧೆ) ಹಾಗೂ ಎನ್‌ಸಿಪಿಯ (ಅಜಿತ್ ಪವಾರ್) ಪಕ್ಷಗಳು ಇವೆ. ಈಗ ಎರಡೂ ಪಕ್ಷಗಳ ಪ್ರಮುಖ ನಾಯಕರು ಆಡಳಿತ ಪಕ್ಷದಲ್ಲಿದ್ದು, ಈ ವಿಚಾರವೂ ಎನ್‌ಸಿಪಿಗೆ ತಲೆಬಿಸಿಯಾಗಿದೆ.
ಬಿಜೆಪಿಗೆ ತಲೆಬಿಸಿ: ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ರಣತಂತ್ರಕ್ಕೆ ಬಿಜೆಪಿ ಕಂಗಾಲಾಗಿದೆ. 2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನಿರೀಕ್ಷಿತ ಪ್ರಮಾಣದ ಸ್ಥಾನ ಗಳಿಸಿಲ್ಲ. ಅಲ್ಲದೇ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಜನರಲ್ಲಿ ಕೆಲವು ವಿಷಯಗಳ ಬಗ್ಗೆ ಅಸಮಾಧಾನವೂ ಇದೆ. ಇನ್ನು ಮಹಾರಾಷ್ಟ್ರದಲ್ಲಿ ನಿರ್ಮಾಣ ಮಾಡಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿರುವುದು ಸಹ ಆಡಳಿತರೂಢ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಇದೀಗ ವಿರೋಧ ಪಕ್ಷಗಳ ರಣತಂತ್ರ ಬಿಜೆಪಿಯನ್ನು ಕಂಗೆಡಿಸಿದೆ.












Click it and Unblock the Notifications