Maharashtra Assembly Election 2024: ಮಹಾಯತಿ ಮೈತ್ರಿಕೂಟದ ಸಿಎಂ ಅಭ್ಯರ್ಥಿ, ಮೌನ ಮುರಿದ ಅಮಿತ್ ಶಾ
ಮುಂಬೈ, ನವೆಂಬರ್ 11: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತದಾನಕ್ಕೆ 9 ದಿನ ಬಾಕಿ ಇದೆ. ಬಿಜೆಪಿ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸುತ್ತಿದೆ. ಮೈತ್ರಿಕೂಟದ ಸೀಟು ಹಂಚಿಕೆ ಆಗಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಅಂತಿಮಗೊಂಡಿಲ್ಲ. ಸದ್ಯ ಮೈತ್ರಿಕೂಟದ ಮಿತ್ರ ಪಕ್ಷವಾದ ಶಿವಸೇನೆಯ ಏಕನಾಥ್ ಶಿಂಧೆ, ಮುಖ್ಯಮಂತ್ರಿ. ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ, ನವೆಂಬರ್ 23ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಭಾನುವಾರ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅವರು 2024ರ ಚುನಾವಣೆಯಲ್ಲಿ 'ಮಹಾಯತಿ' ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಸಹ ಮಾತನಾಡಿದ್ದಾರೆ.

ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿದೆ. ಈ ಬಾರಿಯ ಚುನಾವಣೆಯನ್ನು ಸಹ ಈ ಮೈತ್ರಿಕೂಟದ ಮೂಲಕವೇ ಬಿಜೆಪಿ ಎದುರಿಸುತ್ತಿದೆ. ಆದರೆ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ.
ಮೌನ ಮುರದಿ ಅಮಿತ್ ಶಾ: ಪ್ರಣಾಳಿಕೆ ಬಿಡುಗಡೆ ಬಳಿಕ ಮತಾನಾಡಿದ ಅಮಿತ್ ಶಾ, "ವಿಧಾನಸಭೆ ಚುನಾವಣೆಗೆ ಇದು ಬಿಜೆಪಿಯ ಸಂಕಲ್ಪ ಪತ್ರ. ಮಹಾರಾಷ್ಟ್ರ ರಾಜ್ಯದ ಆಶಯಗಳ ನಿರ್ಣಯ ಪತ್ರ. ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ ಜಯಗಳಿಸುವ ಮೂಲಕ ಪುನಃ ರಾಜ್ಯದಲ್ಲಿ ಅಧಿಕಾರವನ್ನು ಪಡೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಮಹಾಯತಿ ಮೈತ್ರಿಕೂಟದ ಎಲ್ಲಾ ಪಕ್ಷಗಳ ಜೊತೆ ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ತೀರ್ಮಾನಿಸಲಾಗುತ್ತದೆ" ಎಂದು ಅಮಿತ್ ಶಾ ಹೇಳಿದರು.
"ಸದ್ಯಕ್ಕೆ ಏಕನಾಥ್ ಶಿಂಧೆ ಮುಖ್ಯಮಂತ್ರಿಗಳು. ಚುನಾವಣೆ ಬಳಿಕ ಮೂರು ಪಕ್ಷಗಳು ಒಟ್ಟು ಸೇರಿ ಮುಂದಿನ ಮುಖ್ಯಮಂತ್ರಿ ಯಾರು? ಎಂದು ತೀರ್ಮಾನ ಮಾಡಲಿದ್ದೇವೆ" ಎಂದು ಅಮಿತ್ ಶಾ ತಿಳಿಸಿದರು. ಮೂಲಕ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಅಮಿತ್ ಶಾ ನೀಡಿದರು.
ಅಮಿತ್ ಶಾ ಚುನಾವಣೆಯಲ್ಲಿ ಎದುರಾಳಿಯಾದ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ವಿರುದ್ಧ ಟೀಕೆಗಳನ್ನು ಮಾಡಿದರು. ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಎರಡು ಭಾಗವಾಗಲು ಉದ್ಧವ್ ಠಾಕ್ರೆ ಕಾರಣ" ಎಂದು ಆರೋಪ ಮಾಡಿದರು.
"ಉದ್ಧವ್ ಠಾಕ್ರೆ ಏಕನಾಥ್ ಶಿಂಧೆ ಬದಲು ತಮ್ಮ ಪುತ್ರನಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಶರದ್ ಪವಾರ್ ಅಜಿತ್ ಪವಾರ್‌ಗಿಂತ ಪುತ್ರಿಗೆ ಹೆಚ್ಚಿನ ಆದ್ಯತೆ ನೀಡಿದರು. ಪಕ್ಷದ ಕಾರ್ಯಕರ್ತರಿಗಿಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಕ್ಷ ವಿಭಾಗವಾಗುವಂತೆ ಮಾಡಲಾಗಿದೆ" ಎಂದು ಅಮಿತ್ ಶಾ ಟೀಕಿಸಿದರು.
"ಚುನಾವಣೆಗೆ ಮೂರು ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿವೆ. ಚುನಾವಣೆ ಫಲಿತಾಂಶದ ಬಳಿಕ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಸಮಿತಿ ಮೂರು ಪಕ್ಷಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ" ಎಂದು ಅಮಿತ್ ಶಾ ಹೇಳಿದರು.












Click it and Unblock the Notifications