ಮಧ್ಯಪ್ರದೇಶ: ಜೈನ ದೇವಸ್ಥಾನದಿಂದ ಕದ್ದ ಮಾಲುಗಳನ್ನು ಹಿಂದಿರುಗಿಸಿದ ಕಳ್ಳ
ಭೋಪಾಲ್, ಅ. 31: ಮಧ್ಯಪ್ರದೇಶದ ಕಳ್ಳನೊಬ್ಬ ಜೈನ ದೇವಾಲಯದಿಂದ ಕದ್ದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿರುವ ಘಟನೆ ನಡೆದಿದೆ. ಕದ್ದ ಮಾಲುಗಳ ಜೊತೆಗೆ ಕ್ಷಮಾಪಣೆಯ ಚೀಟಿಯನ್ನೂ ಬಿಟ್ಟು ಹೋಗಿದ್ದಾರೆ.
ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿರುವ ಜೈನ ದೇವಾಲಯದಿಂದ ಅಕ್ಟೋಬರ್ 24 ರಂದು ಕಳ್ಳನೊಬ್ಬ ಕಳ್ಳತನ ನಡೆಸಿ, ಬೆಲೆ ಬಾಳುವ ವಸ್ತುಗಳನ್ನು ಕದ್ದುಕೊಂಡು ಹೋಗಿದ್ದನು. ಈಗ ಕ್ಷಮಾಪಣೆಯನ್ನು ಕೇಳಿ ಕದ್ದಿರುವ ಎಲ್ಲಾ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ.
ಅಕ್ಟೋಬರ್ 24 ರಂದು ಬಾಲಾಘಾಟ್ ಪಟ್ಟಣದ ಲಮ್ಟಾ ಪ್ರದೇಶದಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಹಲವಾರು ಬೆಲೆಬಾಳುವ ವಸ್ತುಗಳು ಕಾಣೆಯಾಗಿದ್ದವು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆ ಕುರಿತು ಪೊಲೀಸರು ತನಿಖೆಯನ್ನು ಪ್ರಾರಂಭಿಸಿ, ಸಾಕ್ಷಿ ಸಂಗ್ರಹಿಸಿದ್ದರು. ಆದರೆ, ಯಾವುದೇ ಬಂಧನ ಮಾಡುವ ಮೊದಲೇ ಕಳ್ಳತನವಾಗಿದ್ದ ಒಡವೆಗಳು ದೊರಕಿವೆ. ಕಳ್ಳತನ ನಡೆದ ನಾಲ್ಕು ದಿನಗಳ ನಂತರ ದೇವಾಲಯದ ಬಳಿಯ ಹೊಂಡದಲ್ಲಿ ಚೀಲದಲ್ಲಿ ಕಳ್ಳತನವಾಗಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಸುತ್ತಿಟ್ಟು ಹೋಗಿರುವುದನ್ನು ಸ್ಥಳೀಯರು ಪತ್ತೆಹಚ್ಚಿದ್ದಾರೆ.
ಒಡವೆ ಬ್ಯಾಗ್‌ನಲ್ಲಿ ಕದ್ದ ಒಡವೆಗಳಲ್ಲದೇ, "ನಾನು ಅಪರಾಧ ಮಾಡಿದ ನಂತರ ತುಂಬಾ ನೋವನ್ನು ಅನುಭವಿಸಿದೆ. ಅದಕ್ಕಾಗಿಯೇ ನಾನು ಈ ವಸ್ತುಗಳನ್ನು ಹಿಂದಿರುಗಿಸುತ್ತಿದ್ದೇನೆ. ಈ ವಸ್ತುಗಳನ್ನು ಕದ್ದಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ಚೀಟಿ ಕೂಡ ಇಡಲಾಗಿದೆ.
ಜೈನ ಕುಟುಂಬವೊಂದು ಹೊಂಡದ ಬಳಿಯ ನಲ್ಲಿಯಿಂದ ನೀರು ತುಂಬಿಸುತ್ತಿದ್ದಾಗ ಅಲ್ಲೇ ಬಿದ್ದಿದ್ದ ಚೀಲವನ್ನು ಗಮನಿಸಿದ್ದಾರೆ. ಅದನ್ನು ತೆರೆದು ನೋಡಿದಾಗ ಕಳುವಾದ ವಸ್ತುಗಳನ್ನು ಕಂಡು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಾವು ಅತ್ಯಂತ ಸಂತೋಷವಾಗಿದ್ದೇವೆ. ಚೀಲದಲ್ಲಿ ಕ್ಷಮೆಯಾಚನೆಯ ಚೀಟಿಯೂ ಇತ್ತು. ಇದು ದೇವರು ನಮ್ಮೊಂದಿಗಿದ್ದಾನೆ ಮತ್ತು ಪವಾಡಗಳು ಸಂಭವಿಸುತ್ತವೆ ಎಂಬುದನ್ನು ತೋರಿಸುತ್ತದೆ" ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಆದರೆ, ದೇವಾಲಯದಿಂದ ಈ ಬೆಲೆಬಾಳುವ ವಸ್ತುಗಳನ್ನು ಕದ್ದವರು ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications