Madhya Pradesh; ಸೋತ, ಗೆದ್ದ ಬಿಜೆಪಿ ಕೇಂದ್ರ ಸಚಿವರು, ಸಂಸದರು
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳು ಸುಳ್ಳಾಗಿವೆ. ಬಿಜೆಪಿ ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ ಯಾರು? ಎಂಬ ಚರ್ಚೆಗಳು ಆರಂಭವಾಗಿವೆ.
ಭಾನುವಾರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.

ಚುನಾವಣಾ ಆಯೋಗದ 4 ಗಂಟೆಯ ಮಾಹಿತಿಯಂತೆ ಬಿಜೆಪಿ 168 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ 61 ಮತ್ತು ಇತರೆ ಅಭ್ಯರ್ಥಿಗಳು 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಕಣಕ್ಕೆ ಕೇಂದ್ರ ಸಚಿವರು, ಸಂಸದರನ್ನು ಕಣಕ್ಕಿಳಿಸಿದ ಬಿಜೆಪಿ ತಂತ್ರ ಫಲ ನೀಡಿದೆಯೇ? ಇಲ್ಲಿದೆ ಮಾಹಿತಿ.
ಮುನ್ನಡೆ, ಹಿನ್ನಡೆ; ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ದಿಮಾನಿ ಕ್ಷೇತ್ರದಿಂದ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ಸದ್ಯದ ಮಾಹಿತಿಯಂತೆ 5,357 ಮತಗಳ ಅಂತರದಲ್ಲಿ ಅವರು ಮನ್ನಡೆಯಲ್ಲಿದ್ದಾರೆ. ಗೆಲ್ಲುವುದು ಸಹ ಬಹತೇಕ ಖಚಿತವಾಗಿದೆ.
ನರಸಿಂಗಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಮತ್ತೊಬ್ಬ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ 15,684 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವ ಫಗ್ಗಾನ್ ಸಿಂಗ್ ಕುಲಸ್ತೆ ನಿವಾಸ್ ಕ್ಷೇತ್ರದಲ್ಲಿ 11,216 ಮತಗಳ ಹಿನ್ನಡೆಯಲ್ಲಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣಾ ಕಣದಲ್ಲಿ ಮೂವರು ಕೇಂದ್ರ ಸಚಿವರು, ಏಳು ಸಂಸದರು ಇದ್ದಾರೆ. ಲೋಕಸಭೆ ಚುನಾವಣೆಗೆ ಸುಮಾರು 6 ತಿಂಗಳು ಬಾಕಿ ಇರುವುದು, ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಪಕ್ಷದ ತಂತ್ರಕ್ಕೆ ಈ ದಾಳ ಉರುಳಿಸಲಾಗಿದೆ.
ನಾಲ್ಕು ಬಾರಿಯ ಸಂಸದ ಗಣೇಶ್ ಸಿಂಗ್ ಸಾತ್ನಾ ಕ್ಷೇತ್ರದಲ್ಲಿ ಕಣದಲ್ಲಿದ್ದು 666 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. 2018ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು.
ರಾಕೇಶ್ ಸಿಂಗ್ ಜಬಲ್ಪುರ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. 23,000 ಮತಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ. ಸಂಸದ ರಿತಿ ಪಾಠಕ್ ಮೊದಲ ಬಾರಿಗೆ ಸಿಧಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. 8,300 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಸಹ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದಾರೆ. ಸಾಮೂಹಿಕ ನಾಯಕತ್ವದ ಜಪ ಮಾಡಿದ ಬಿಜೆಪಿ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವನ್ನೇ ಪಡೆದಿದೆ.
ಚುನಾವಣಾ ಆಯೋಗದ ಅಧಿಕೃತ ಘೋಷಣೆ ಬಳಿಕ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಿದೆ? ಎಂಬುದು ತಿಳಿಯಲಿದೆ. ಈಗ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಚರ್ಚೆಗಳು ಆರಂಭವಾಗಿವೆ.












Click it and Unblock the Notifications