LPG Price: ಡಿಸೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ದುಬಾರಿಯೇ? ಬೆಲೆ ಎಷ್ಟಿರಲಿದೆ?
ಇತ್ತೀಚಿನ ವರದಿಗಳ ಪ್ರಕಾರ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದೊಡ್ಡ ಶಾಕ್ ಕಾದಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಬದಲಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಪರಿಷ್ಕರಣೆಗಳು ಅಂತರರಾಷ್ಟ್ರೀಯ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರವನ್ನು ಆಧರಿಸಿವೆ. ಹೀಗಾಗಿ ನಾಳೆಯಿಂದಲೇ ದರಗಳು ಏರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆ ಹೆಚ್ಚಾಗಲಿದೆ.
ಹೌದು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಮಹಿಳಾ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ಅನ್ನು ಸಬ್ಸಿಡಿ ಮೂಲಕ ಮನೆಬಾಗಿಲಿಗೆ ವಿತರಿಸುತ್ತಿದೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳು ತೀವ್ರ ನಷ್ಟದಲ್ಲಿವೆ. ಅಲ್ಲದೆ ಇತ್ತೀಚೆಗೆ ಭಾರತ ಸರ್ಕಾರವು ಅಮೇರಿಕಾದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲದರ ಪರಿಣಾಮ ಎಲ್‌ಪಿಜಿ ದರಗಳು ಡಿಸೆಂಬರ್‌ನಿಂದಲೇ ಹೆಚ್ಚಾಗುವ ಸಾಧ್ಯತೆ ಇದೆ.

ಅಮೆರಿಕದೊಂದಿಗಿನ ಎಲ್‌ಪಿಜಿ ಖರೀದಿ ಒಪ್ಪಂದವು ಭಾರತದ ಮಟ್ಟಿಗೆ ಒಳ್ಳೆಯ ನಿರ್ಧಾರವೇ ಆಗಿದೆ. ಆದರೆ ಹೆಚ್ಚಿನ ದೂರ ಮತ್ತು ಹೆಚ್ಚಿನ ಸರಕು ಸಾಗಣೆ ವೆಚ್ಚಗಳು ತೈಲ ಮಾರುಕಟ್ಟೆ ಕಂಪನಿಗಳಿಗೆ ಅಲ್ಪಾವಧಿಯಲ್ಲಿ ಸ್ವಲ್ಪ ದುಬಾರಿಯಾಗಬಹುದು ಎನ್ನಲಾಗಿದೆ. ಭಾರತವು ವಾರ್ಷಿಕವಾಗಿ 2.2 ಮಿಲಿಯನ್ ಟನ್ ಎಲ್‌ಪಿಜಿ ಅಮೇರಿಕಾದಿಂದ ಆಮದು ಮಾಡಿಕೊಳ್ಳಲಿದೆ. ಇದು ಮಧ್ಯಪ್ರಾಚ್ಯ ಉತ್ಪಾದಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಗ್ರಾಹಕರಿಗೆ ಇದರಿಂದ ಬೆಲೆ ಏರಿಕೆ ಬಿಸಿಯೂ ತಟ್ಟಬಹುದು.
ಎಲ್‌ಪಿಜಿ ದರ ಈಗ ಎಷ್ಟಿದೆ?
ಬೆಂಗಳೂರಿನಲ್ಲಿ 14.2 ಕೆ.ಜಿ ತೂಕದ ಗೃಹಬಳಕೆ ಎಲ್‌ಪಿಜಿ ಬೆಲೆ ₹855.50 ಆಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹1,664.50 ಇದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನ ಎಲ್‌ಪಿಜಿ ಬೆಲೆಗಳು ಪರಿಷ್ಕರಣೆಯಾಗುತ್ತವೆ. ಸರ್ಕಾರದ ಇತ್ತೀಚಿನ ಮಹತ್ವದ ನಿರ್ಧಾರಗಳಿಂದ ಈ ಬಾರಿ ಗೃಹಬಳಕೆ ಎಲ್‌ಪಿಜಿ ದರಗಳು ತುಸು ಏರಿಕೆ ಕಾಣುವುದು ಪಕ್ಕಾ ಎನ್ನಲಾಗಿದೆ. ದರ ಏರುತ್ತದೆಯೋ ಅಥವಾ ಕಡಿಮೆಯಾಗುತ್ತದೆಯೋ ಎನ್ನುವುದು ಸೋಮವಾರ ಬೆಳಿಗ್ಗೆ ಅಂತಿಮವಾಗಿ ತಿಳಿಯಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಇತ್ತೀಚೆಗೆ ದೆಹಲಿಯಲ್ಲಿ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ವಿತರಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹೊಗೆ ತುಂಬಿದ ಅಡುಗೆಮನೆಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಎಲ್‌ಪಿಜಿಗೆ ಆದ್ಯತೆ ನೀಡಲಾಗಿದೆ. 2016ರಲ್ಲಿ ಈ ಯೋಜನೆ ಜಾರಿಯಾದಾಗಿನಿಂದ ದೆಹಲಿಯಲ್ಲೇ 2.50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ.












Click it and Unblock the Notifications