ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಉ. ಪ್ರದೇಶದಲ್ಲಿ ಬಿಜೆಪಿಗೆ 25 ಸ್ಥಾನ
Recommended Video

ನವದೆಹಲಿ, ಜನವರಿ 24: ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತಿದೆ.
ಒಟ್ಟು 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.
ದೇಶದಲ್ಲಿ ಕಳೆದ 24 ವರ್ಷಗಳಲ್ಲಿಯೇ ನಡೆದ ಅತಿ ದೊಡ್ಡ ಹಾಗೂ ನಿಖರ ಸ್ವತಂತ್ರ ಚುನಾವಣಾ ಪೂರ್ವ ಮಾದರಿ ಸಮೀಕ್ಷೆಯಾಗಿದೆ ಎಂದು ಸಿ ವೋಟರ್ ಹೇಳಿಕೊಂಡಿದೆ.
ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಉತ್ತರ ಪ್ರದೇಶದ ಫಲಿತಾಂಶ ಇಲ್ಲಿದೆ.

ಪೂರ್ವ ಉತ್ತರ ಪ್ರದೇಶ
ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಬುಧವಾರ ನೇಮಕವಾಗಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಸಿ ವೋಟರ್ ಸಮೀಕ್ಷೆ ಈ ನೇಮಕಕ್ಕೂ ಮೊದಲೇ ನಡೆದಿರುವುದರಿಂದ ಫಲಿತಾಂಶ ಬದಲಾಗುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಪೂರ್ವ ಭಾಗದ 21 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಕೇವಲ ಆರು ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಉಳಿದ 15 ಕ್ಷೇತ್ರಗಳು ಎಸ್ಪಿ, ಬಿಎಸ್ಪಿ ಮಹಾಮೈತ್ರಿಕೂಟದ ಪಾಲಾಗಲಿದೆ. ಯುಪಿಎ ಅದರ ಖಾತೆ ತೆರೆಯುವುದು ಸಾಧ್ಯವಾಗಲಾರದು ಎನ್ನಲಾಗಿದೆ.

ಅವಾಧ್ ಪ್ರದೇಶ
ಅವಾಧ್ ಪ್ರದೇಶದಲ್ಲಿರುವ 18 ಲೋಕಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳು ಎಸ್ಪಿ-ಬಿಎಸ್ಪಿ ಮಹಾಮೈತ್ರಿಕೂಟದ ಪಾಲಾಗಲಿದೆ.
ಎನ್‌ಡಿಎ ಮೈತ್ರಿಕೂಟ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎರಡು ಸ್ಥಾನಗಳು ಕಾಂಗ್ರೆಸ್‌ಗೆ ದಕ್ಕಬಹುದು ಎಂದು ಸಮೀಕ್ಷೆ ತಿಳಿಸಿದೆ.

ಬುಂದೇಲಖಾಂಡ್ ಪ್ರದೇಶ
ಬುಂದೇಲಖಾಂಡ್‌ನ 15 ಲೋಕಸಭಾ ಕ್ಷೇತ್ರಗಳಲ್ಲಿ ಎಂಟು ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಗೆಲುವು ಸಾಧಿಸಲಿವೆ.
ಎನ್‌ಡಿಎ ಮೈತ್ರಿಕೂಟಕ್ಕೆ ಆರು ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆಲ್ಲಲಿದೆ.

ಪಶ್ಚಿಮ ಉತ್ತರ ಪ್ರದೇಶ
ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ 26 ಕ್ಷೇತ್ರಗಳ ಪೈಕಿ 15ರಲ್ಲಿ ಮಹಾ ಮೈತ್ರಿಕೂಟ ಜಯಭೇರಿ ಭಾರಿಸಲಿದೆ. ಬಿಜೆಪಿ ಹತ್ತು ಕ್ಷೇತ್ರಗಳಲ್ಲಿ ಗೆಲುವು ತನ್ನದಾಗಿಸಿಕೊಳ್ಳಬಹುದು. ಇನ್ನು ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯ ದಕ್ಕಿಸಿಕೊಳ್ಳಬಹುದು ಎಂದು ಸಮೀಕ್ಷೆ ತಿಳಿಸಿದೆ.

ಒಟ್ಟಾರೆ ಉತ್ತರ ಪ್ರದೇಶ
ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಎದುರಿಸಲಿದೆ. 2014ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. ಆದರೆ, ಈ ಬಾರಿ ಅದರ ಸಂಖ್ಯೆ ಕೇವಲ 25ಕ್ಕೆ ಕುಸಿಯಲಿದೆ. ಬಿಎಸ್ಪಿ-ಎಸ್ಪಿ ಮೈತ್ರಿಕೂಟ 51 ಸೀಟುಗಳನ್ನು ಗೆಲ್ಲಲಿವೆ. ಇನ್ನು ಉಳಿದ 4 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ.












Click it and Unblock the Notifications