ಲೋಕಸಭಾ ಚುನಾವಣೆಗೆ ರಣತಂತ್ರ: ಉದ್ಧವ್, ಶರದ್ ಪವಾರ್ ಭೇಟಿಯಾಗಲಿರುವ ನಿತೀಶ್ ಕುಮಾರ್
ಮುಂಬೈ, ಮೇ. 10: ಪ್ರತಿಪಕ್ಷಗಳನ್ನು ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸುತ್ತಿರುವ ಜನತಾ ದಳ (ಯು) ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಬೆಳಗ್ಗೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಮಹಾರಾಷ್ಟ್ರದ ಪ್ರಮುಖ ವಿಪಕ್ಷ ನಾಯಕರ ಜೊತೆಗೆ ಮಾತುಕತೆ ನಡೆಸಿ, ಭೋಜನ ಸವಿಯಲಿದ್ದಾರೆ.
ನಿತೀಶ್ ಕುಮಾರ್ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಮಹಾರಾಷ್ಟ್ರದ ಉನ್ನತ ನಾಯಕರನ್ನು ಭೇಟಿಯಾಗಲಿದ್ದಾರೆ. ಬಾಂದ್ರಾದ 'ಮಾತೋಶ್ರೀ' ಯಲ್ಲಿ ಊಟದ ನಂತರ ಸಭೆ ನಡೆಸಲಿದ್ದಾರೆ. ಜೊತೆಗೆ ದಕ್ಷಿಣ ಮುಂಬೈನ ಅವರ 'ಸಿಲ್ವರ್ ಓಕ್ಸ್' ಮನೆಯಲ್ಲಿ ಚಹಾ ಕೂಟದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಸೇರಿಕೊಳ್ಳಲಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಎಲ್ಲಾ ಸಣ್ಣ ಮತ್ತು ಜಾತ್ಯತೀತ ಮೈತ್ರಿ ಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಮುಂದಾಳತ್ವ ವಹಿಸಿದ್ದಾರೆ. ಅದರ ಭಾಗವಾಗಿಯೇ ಅವರು ಎಲ್ಲಾ ಪಕ್ಷಗಳ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ವಿರೋಧ ಪಕ್ಷಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮ ನಾಯಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೆಲಸಕ್ಕೆ ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಜೆಡಿಯುನ ಎಂಎಲ್‌ಸಿ ಮತ್ತು ಪ್ರಧಾನ ಕಾರ್ಯದರ್ಶಿ ಕಪಿಲ್ ಪಾಟೀಲ್ ಹೇಳಿದ್ದಾರೆ.
1977ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ವಿರುದ್ಧ ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳು ಒಗ್ಗೂಡಿದ್ದವು. ಅದೇ ರೀತಿ ಸಂವಿಧಾನ ಉಳಿಸಬೇಕಾದರೆ ಇಂದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಂದಾಗಬೇಕಿದೆ ಎಂದಿದ್ದಾರೆ. "ಸಾಂವಿಧಾನಿಕ ಒಕ್ಕೂಟ ರಚನೆಗೆ ಧಕ್ಕೆಯಾಗಿದೆ. ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯೇತರ ಆಡಳಿತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ" ಎಂದಿದ್ದಾರೆ.
ಅಲ್ಲದೆ, ಕೇಂದ್ರೀಯ ತನಿಖಾ ಏಜೆನ್ಸಿಗಳು ಮತ್ತು ಸಂಸ್ಥೆಗಳು ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಅಧಿಕಾರದಲ್ಲಿ ಉಳಿಯುತ್ತವೆ. ಹಾಗಾಗಿ, 2024ರಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಎಲ್ಲಾ ಸಣ್ಣ ಮತ್ತು ದೊಡ್ಡ ಪಕ್ಷಗಳು ಒಗ್ಗೂಡಬೇಕು. ಇಲ್ಲದಿದ್ದರೆ 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಕೊನೆಯ ಚುನಾವಣೆಯಾಗಲಿದೆ ಎಂದು ಕಪಿಲ್ ಪಾಟೀಲ್ ಹೇಳಿದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಬೆಂಬಲ ನೀಡಿದ್ದು, ಯಾರಾದರೂ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದರೆ, ಪ್ರತಿಪಕ್ಷವಾಗಿ ಅವರು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಬೇಕು ಎಂದು ಹೇಳಿದ್ದರು. ಜೊತೆಗೆ ಎನ್‌ಸಿಪಿಯಾಗಿ ನಾವು ನಿತೀಶ್ ಕುಮಾರ್ ಜೊತೆಗಿದ್ದೇವೆ ಎಂದು ಶರದ್ ಪವಾರ್ ಬೆಂಬಲ ಘೋಷಿಸಿದ್ದರು.
ಬಿಹಾರ ಸಿಎಂ ನಿತೀಶ್ ಕುಮಾರ್ ಈ ಹಿಂದೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದರು.












Click it and Unblock the Notifications