Lok Sabha: ರಾಹುಲ್ ಗಾಂಧಿ ಹೇಳಿಕೆ ವಿವಾದ: ಲೋಕಸಭೆ ಅಧಿವೇಶನ ಫೆ.3ಕ್ಕೆ ಮುಂದೂಡಿಕೆ
ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣ ಮಾಡುವ ಸಂದರ್ಭದಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವಿಷಯ ಪ್ರಸ್ತಾಪನೆ ಮಾಡುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಗ್ವಾದ ಜೋರಾದ ಬೆನ್ನಲ್ಲೇ ಕಲಾಪವನ್ನು ಸ್ಥಗಿತಗೊಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ರಾಹುಲ್ ಗಾಂಧಿ ಅವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಔಪಚಾರಿಕವಾಗಿ ಪ್ರಕಟವಾದ ವಿಷಯವನ್ನು ಮಾತ್ರ ಸದನದಲ್ಲಿ ಉಲ್ಲೇಖಿಸಬಹುದು ಎಂದು ಒತ್ತಾಯಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸತತ ಒಂಬತ್ತನೇ ಕೇಂದ್ರ ಬಜೆಟ್ ಮಂಡಿಸಿದ ಒಂದು ದಿನದ ನಂತರ, ಸೋಮವಾರ ನಡೆಯುತ್ತಿರುವ ಬಜೆಟ್ ಅಧಿವೇಶನದ ನಡುವೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಲೋಕಸಭೆ ಕಲಾಪವನ್ನು ಮಂಗಳವಾರ ಫೆಬ್ರವರಿ 3ಕ್ಕೆ ಮುಂದೂಡಲಾಗಿದೆ.

ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2026ರ ಮೇಲಿನ ಚರ್ಚೆ ಪ್ರಾರಂಭವಾಗಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಫೆಬ್ರವರಿ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರಿಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಸಂಸತ್ತಿನ ಹೊರಗೆ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಅಲ್ಲದೇ ಸದನದಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದರು.
ಬಜೆಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ವರದಿಗಾರರು ಪ್ರಶ್ನೆಗೆ ರಾಹುಲ್ ಗಾಂಧಿ ಅವರು, ಸಂಸತ್ತು ಒದಗಿಸಿದ ವೇದಿಕೆಯನ್ನು ಬಳಸಿಕೊಂಡು ನಾಳೆ ಮಾತನಾಡುತ್ತೇನೆ ಎಂದಷ್ಟೇ ಹೇಳಿದ್ದರು. ಆದರೆ ಸೋಮವಾರ / ಫೆಬ್ರವರಿ 2ರಂದು ಅವರು ಮಾಡಿರುವ ಭಾಷಣವು ಭಾರೀ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ಅಲ್ಲದೇ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ.
ರಾಹುಲ್ ಗಾಂಧಿ ಎಕ್ಸ್ ಪೋಸ್ಟ್
ಇನ್ನು ಕೇಂದ್ರ ಬಜೆಟ್ 2026ಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು. ಉದ್ಯೋಗವಿಲ್ಲದ ಯುವಕರು. ಕುಸಿಯುತ್ತಿರುವ ಉತ್ಪಾದನೆ, ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ., ಮನೆಯ ಉಳಿತಾಯ ಕುಸಿಯುತ್ತಿದೆ. ಸಂಕಷ್ಟದಲ್ಲಿ ರೈತರು. ಜಾಗತಿಕ ಆಘಾತಗಳು ಎದುರಾಗುತ್ತಿವೆ - ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ. ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸದೆ, ಮಾರ್ಗ ತಿದ್ದುಪಡಿಯನ್ನು ನಿರಾಕರಿಸುವ ಬಜೆಟ್ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದೇನು
ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನಾರವಣೆ ಅವರ ಪ್ರಕಟಣೆಗೊಳ್ಳದ ಪುಸ್ತಕದ ಕೆಲವು ನಿರ್ದಿಷ್ಟ ಭಾಗವನ್ನು ಓದುವುದಕ್ಕೆ ಮುಂದಾಗಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಪ್ರಕಟವಾಗದೆ ಇರುವ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಕ್ಕೆ ಅವಕಾಶವಿಲ್ಲ ಎಂದು ಆಡಳಿತ ಪಕ್ಷವು ಹೇಳಿದೆ.












Click it and Unblock the Notifications