Monsoon Session 2023: ಮೋದಿ ಸರ್ಕಾರದ ಮುಂಗಾರು ಅಧಿವೇಶನ ಮುಕ್ತಾಯ!
ನವದೆಹಲಿ: ಹಲವು ಏಳುಬೀಳು, ಏರುಪೇರುಗಳ ನಡುವೆ ಲೋಕಸಭೆ ಮುಂಗಾರು ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದೆ. ಮಣಿಪುರ ಹಿಂಸಾಚಾರ ಸಂಬಂಧ ಬಿಜೆಪಿ & ವಿರೋಧ ಪಕ್ಷಗಳ ನಡುವೆ, ತೀವ್ರ ತಿಕ್ಕಾಟಕ್ಕೂ ಸಾಕ್ಷಿಯಾದ ಈ ಬಾರಿಯ ಸಂಸತ್ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗಾದರೆ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಎಷ್ಟು ದಿನ ಹಾಗೂ ಎಷ್ಟು ಗಂಟೆ ಕಾಲ ಚರ್ಚೆ ನಡೆದಿದೆ? ಬನ್ನಿ ತಿಳಿಯೋಣ.
ಸಂಸತ್ ಮುಂಗಾರು ಅಧಿವೇಶನ ಭಾರಿ ಕುತೂಹಲ ಕೆರಳಿಸಿತ್ತು. ಅದರಲ್ಲೂ ಈ ಬಾರಿ ಮಣಿಪುರದ ವಿಚಾರ ಹಿಡಿದು ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಘೋರ ಯುದ್ಧ ಸಾರಿದ್ದವು. ಆದರೆ ಪ್ರಧಾನಿ ಮೋದಿ ನಿನ್ನೆಯವರೆಗೂ ವಿಪಕ್ಷಗಳ ಮಾತಿಗೆ ಉತ್ತರ ನೀಡದೆ, ನಿನ್ನೆ ಅಧಿಕೃತವಾಗಿ ವಿಪಕ್ಷಗಳ ಆರೋಪಗಳ ವಿರುದ್ಧ ಮೌನ ಮುರಿದಿದ್ದರು. ಅಲ್ಲದೆ ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ, ವಿಪಕ್ಷಗಳ ಒಕ್ಕೂಟ ಇಂಡಿಯಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೀಗೆ ಸಾಕಷ್ಟು ತಿಕ್ಕಾಟಕ್ಕೆ ಸಾಕ್ಷಿಯಾಗಿದ್ದ ಮುಂಗಾರು ಅಧಿವೇಶನ 2023 ಮುಕ್ತಾಯವಾಗಿದೆ.

ಎಷ್ಟುದಿನ ನಡೆಯಿತು ಮುಂಗಾರು ಅಧಿವೇಶನ?
ದೇಶದ ಪಾಲಿಗೆ ಮುಂಗಾರು ಅಧಿವೇಶನ ಬಹುಮುಖ್ಯವಾಗಿದ್ದು, ಆದರೆ ಈ ಬಾರಿ ಮಣಿಪುರದ ಹಿಂಸಾಚಾರ ದೊಡ್ಡ ಗಲಾಟೆ ಎಬ್ಬಿಸಿತ್ತು. ಆಡಳಿಪಕ್ಷ ಮತ್ತು ವಿಪಕ್ಷಗಳ ತಿಕ್ಕಾಟದಲ್ಲಿ ಬೇರೆಲ್ಲ ವಿಚಾರಗಳು ಕಳೆದು ಹೋಗಿವೆ ಎಂಬ ಆರೋಪ ಕೇಳಿಬಂದಿದೆ. ಆದರೂ ಈ ಬಾರಿಯ ಸಂಸತ್ ಅಧಿವೇಶನ ಸಾಕಷ್ಟು ಗಮನ ಸೆಳೆಯಿತು. 17 ದಿನಗಳಲ್ಲಿ ಒಟ್ಟು 44 ಗಂಟೆ 13 ನಿಮಿಷ ಕಾಲ ಅಧಿವೇಶನ ನಡೆಸಿದ್ದೇವೆ ಎಂದು ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. 20 ಮಸೂದೆಗಳನ್ನು ಪರಿಚಯಿಸಿದ್ದು ಒಟ್ಟು 22 ಕರಡು ಮಸೂದೆಗಳನ್ನ ಈ ಬಾರಿ ಅಂಗೀಕರಿಸಲಾಗಿದೆ. ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿ ಇದೀಗ ಆದೇಶ ಹೊರಡಿಸಲಾಗಿದೆ.
ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ
ಈ ಬಾರಿ ಮಣಿಪುರ ಹಿಂಸಾಚಾರದ ರೀತಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕೂಡ ಗಮನ ಸೆಳೆದಿತ್ತು. ಮಣಿಪುರ ಹಿಂಸೆ ಸಂಬಂಧ ಪ್ರಧಾನಿಯಿಂದ ವಿಸ್ತೃತ ಹೇಳಿಕೆ ಬಯಸಿದ್ದ ವಿರೋಧ ಪಕ್ಷಗಳು, ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಹೀಗಾಗಿಯೇ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ 60 ಸಂಸದರು 20 ತಾಸು ಚರ್ಚೆ ನಡೆಸಿದ್ದರು. ಆದರೆ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ಅವಿಶ್ವಾಸ ನಿರ್ಣಯದ ಮತದಾನ ನಡೆದಿತ್ತು. ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ & ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು.

ವಿಪಕ್ಷಗಳ ವಿರುದ್ಧ ಪ್ರಧಾನಿ ಆರೋಪ
ನಿನ್ನೆ ಕಾಂಗ್ರೆಸ್ & ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಎಚ್‌ಎಎಲ್, ಸಾರ್ವಜನಿಕ ಬ್ಯಾಂಕ್‌ಗಳು & ಎಲ್‌ಐಸಿ ಬೆಳವಣಿಗೆ ಪ್ರಸ್ತಾಪಿಸಿದ್ದರು. ಪ್ರತಿಪಕ್ಷಗಳು ಸಾರ್ವಜನಿಕ ಬ್ಯಾಂಕ್‌ಗಳು, ಏರೋಸ್ಪೇಸ್ ಸಂಸ್ಥೆ ಎಚ್‌ಎಎಲ್ ಸೇರಿ ವಿಮಾ ಕಂಪನಿ ಎಲ್‌ಐಸಿ ಮುಳುಗುತ್ತವೆ ಎಂದು ಹೇಳುತ್ತಿದ್ದರು. ಆದರೆ ಅವೆಲ್ಲಾ ಹಿಂದಿಗಿಂತ ಇದೀಗ ಉತ್ತಮವಾಗಿ ಕೆಲಸ ಮಾಡುತ್ತಿವೆ. ಹೊಸ ಎತ್ತರ ತಲುಪುತ್ತಿವೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ಹೇಳಿದ್ದರು. ಆದರೆ ಪ್ರಧಾನಿ ಮೋದಿ ಮಣಿಪುರ ವಿಚಾರ ಮರೆಮಾಚುತ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು.
ಹೀಗೆ ಎಲ್ಲಾ ತಿಕ್ಕಾಟದ ನಡುವೆ ಸಂಸತ್‌ನ ಮುಂಗಾರು ಅಧಿವೇಶನ 2023 ಮುಗಿದು ಹೋಗಿದೆ. ಸದ್ದು, ಗದ್ದಲದ ನಡುವೆ ಹಲವು ಬಿಲ್‌ಗಳು ಪಾಸ್ ಆಗಿವೆ. ಹಾಗೇ ಇನ್ನೂ ಅನೇಕ ಮಹತ್ವದ ಬಿಲ್‌ಗಳನ್ನ ಪಾಸ್ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಮುಂದೆ ಏನಾಗಬಹುದು? ಅನ್ನೋದನ್ನ ಕಾದು ನೋಡಬೇಕು. ಏಕೆಂದರೆ ಇನ್ನೇನು ಲೋಕಸಭೆ ಎಲೆಕ್ಷನ್‌ಗೆ ಕೌಂಟ್‌ಡೌನ್ ಶುರುವಾಗಲಿದ್ದು, ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಒಕ್ಕೂಟಗಳ ನಡುವೆ ಕಾಡ್ಗಿಚ್ಚೇ ಹೊತ್ತಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications