No Confidence Motion: ಅವಿಶ್ವಾಸ ನಿರ್ಣಯದಲ್ಲಿ ಹುದ್ದೆ ಕಳೆದುಕೊಂಡ ಭಾರತದ ಮೂವರು ಪ್ರಧಾನಿಗಳು- ಯಾರು ತಿಳಿಯಿರಿ
ನವದೆಹಲಿ, ಜುಲೈ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಮುಂದಾಗಿವೆ. ಬಿಜೆಪಿಯು ಲೋಕಸಭೆಯಲ್ಲಿ 273 ಸದಸ್ಯರ ಬಲಾಬಲವನ್ನು ಹೊಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 312 ಸದಸ್ಯರನ್ನು ಒಳಗೊಂಡಿದೆ. ಆದರೂ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ.
ವಿರೋಧ ಪಕ್ಷಗಳು ಸೋಲು ಅನುಭವಿಸಲಿವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ವೇಳೆ ತನ್ನ ಎಲ್ಲಾ ಲೋಕಸಭಾ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಪಕ್ಷವು ಮೂರು ಸಾಲಿನ ವಿಪ್ ಅನ್ನು ಜಾರಿ ಮಾಡಿದೆ.

ಕಳೆದ 15 ವರ್ಷಗಳಲ್ಲಿ ಲೋಕಸಭೆಯಲ್ಲಿ ಮಂಡನೆಯಾದ ಮೊದಲ ಅವಿಶ್ವಾಸ ನಿರ್ಣಯ ಇದಾಗಿದೆ. ಈ ಹಿಂದೆ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಮೂವರ ಪ್ರಧಾನಿಗಳು ಸೋಲು ಅನುಭವಿಸಿದ್ದರು. ಬಹುಮತ ಸಾಧಿಸುವಲ್ಲಿ ವಿಫಲರಾಗಿದ್ದರು. ಈ ಮೂವರು ಪ್ರಧಾನಿಗಳ ಬಗ್ಗೆ ತಿಳಿಯಿರಿ.
ವಿಪಿ ಸಿಂಗ್ (1990)
ಜನತಾ ದಳದ ನಾಯಕ ವಿಪಿ ಸಿಂಗ್ ಅವರು 1989 ರಿಂದ 1990 ರ ವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಅವರ ನೇತೃತ್ವದ ನ್ಯಾಷನಲ್ ಫ್ರಂಟ್ ಸಮ್ಮಿಶ್ರ ಸರ್ಕಾರವು ಅಸ್ತಿತ್ವದಲ್ಲಿತ್ತು. ಇದಕ್ಕೆ ಬೆಂಬಲವಾಗಿ ಎಡ ಪಕ್ಷಗಳು ಮತ್ತು ಬಿಜೆಪಿ ನಿಂತಿತ್ತು. ರಾಮ ಮಂದಿರದ ವಿಚಾರದಲ್ಲಿ ಬಿಜೆಪಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ನವೆಂಬರ್ 10, 1990 ರಂದು ಸರ್ಕಾರವು ಅವಿಶ್ವಾಸ ನಿರ್ಣಯವನ್ನು ಕಳೆದುಕೊಂಡಿತು. ವಿಪಿ ಸಿಂಗ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಬಂದೊದಗಿತು.
ವಿಪಿ ಸಿಂಗ್ ಅವರು ಲೋಕಸಭೆಯಲ್ಲಿ ಕೇವಲ 142 ಮತಗಳನ್ನು ಪಡೆಯಲು ಸಫಲರಾದರು. 346 ಮತಗಳ ಅಂತರದಿಂದ ವಿಶ್ವಾಸ ನಿರ್ಣಯವನ್ನು ಕಳೆದುಕೊಂಡರು. ಈ ವೇಳೆ ಎಂಟು ಸದಸ್ಯರು ಗೈರಾಗಿದ್ದರು. ಅವರ ಸರ್ಕಾರ ಉಳಿಯಲು 261 ಮತಗಳ ಅಗತ್ಯವಿತ್ತು.

ಎಚ್‌ಡಿ ದೇವೇಗೌಡ (1997)
1996 ರ ಲೋಕಸಭಾ ಚುನಾವಣೆಯ ನಂತರ ಜನತಾ ದಳದ ಎಚ್‌ಡಿ ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಜೂನ್ 1, 1996 ರಂದು ಕಾಂಗ್ರೆಸ್ ಬೆಂಬಲದೊಂದಿಗೆ ಯುನೈಟೆಡ್ ಫ್ರಂಟ್ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಗೌಡರು ಆಯ್ಕೆಯಾದರು. ಅವರು ಭಾರತದ 11 ನೇ ಪ್ರಧಾನ ಮಂತ್ರಿಯನ್ನಾಗಿ ಆಯ್ಕೆಯಾದರು. ಸುಮಾರು 10 ತಿಂಗಳ ನಂತರ ಸೀತಾರಾಮ್ ಕೇಸರಿ ನೇತೃತ್ವದ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಏಪ್ರಿಲ್ 11, 1997 ರಂದು ನಡೆದ ಅವಿಶ್ವಾಸ ನಿರ್ಣಯದಲ್ಲಿ, ಗೌಡರ 13-ಪಕ್ಷಗಳ ಒಕ್ಕೂಟವು ಲೋಕಸಭೆಯ 545 ಸ್ಥಾನಗಳ ಪೈಕಿ ಕೇವಲ 158 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಅಟಲ್ ಬಿಹಾರಿ ವಾಜಪೇಯಿ (1999)
ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಎರಡು ಅವಿಶ್ವಾಸ ನಿರ್ಣಯಗಳನ್ನು ಎದುರಿಸಿದರು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬಿಜೆಪಿಗೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಆ ನಂತರ ಅವರ ಸರ್ಕಾರವು ಏಪ್ರಿಲ್ 17, 1999 ರಂದು ಒಂದೇ ಮತದಿಂದ ಸೋತಿತು. ಈ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಬಹುಜನ ಸಮಾಜ ಪಕ್ಷವು ಸರ್ಕಾರದ ವಿರುದ್ಧ ಮತ ಚಲಾಯಿಸಿತು. ಈ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅಧಿಕಾರವನ್ನು ಕಳೆದುಕೊಂಡರು.
2003 ರಲ್ಲಿ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮತ್ತೊಂದು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ಆದರೆ, ವಾಜಪೇಯಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು.












Click it and Unblock the Notifications