ಕೇರಳ: ಓಣಂ ಹಬ್ಬದ ಮೊದಲ 9 ದಿನಗಳಲ್ಲಿ 665 ಕೋಟಿ ರೂ.ಗಳ ಮದ್ಯ ಮಾರಾಟ- ಚಂದ್ರಯಾನದ ಬಜೆಟ್ ಅನ್ನೇ ಮೀರಿಸಿದ ಮಲಯಾಳಿಗಳು
ಕೊಚ್ಚಿ, ಸೆಪ್ಟೆಂಬರ್ 02: ಓಣಂ ಹಬ್ಬದ ಮೊದಲ ಒಂಬತ್ತು ದಿನಗಳಲ್ಲಿ ಕೇರಳದಾದ್ಯಂತ 665 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಓಣಂ ಅವಧಿಯ ಮೊದಲ 9 ದಿನಗಳಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ವರ್ಷದ ಓಣಂ ಹಬ್ಬದ ಮೊದಲ 9 ದಿನಗಳಲ್ಲಿ 624 ಕೋಟಿ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ 41 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಹೆಚ್ಚಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೇರಳ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮಳಿಗೆಗಳಲ್ಲಿ ಉತ್ರಾಂ ( ಹತ್ತು ದಿನಗಳ ಓಣಂ ಹಬ್ಬದ ಪ್ರಮುಖ ದಿನ ) ದಿನದಂದು ಮದ್ಯದ ಒಟ್ಟು ಮಾರಾಟವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಏಕೆಂದರೆ ಈ ವರ್ಷದ ಉತ್ರಾಂ ದಿನದಂದು ಒಟ್ಟು ಮಾರಾಟದ ಮೌಲ್ಯವು 116.1 ರೂ.ಗಳಷ್ಟಾಗಿದೆ. ಇದು ಕಳೆದ ವರ್ಷ 112 ಕೋಟಿ ರೂ. ಆಗಿತ್ತು.

ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿರುವ ಬೆವ್‌ಕೋ ಮಳಿಗೆಯು ಸೋಮವಾರ ಅತಿ ಹೆಚ್ಚು 1.06 ಕೋಟಿ ರೂ.ಗಳ ಮದ್ಯ ಮಾರಾಟವನ್ನು ದಾಖಲಿಸಿದೆ. ಮತ್ತೊಂದೆಡೆ, ಕೊಲ್ಲಂನಲ್ಲಿರುವ ಆಶ್ರಮಮ್ ಬೆವ್‌ಕೋ ಔಟ್ಲೆಟ್ ಕೂಡ 1.01 ಕೋಟಿ ರೂಪಾಯಿಗಳ ಮದ್ಯ ಮಾರಾಟವನ್ನು ದಾಖಲಿಸಿದೆ.
ಚಂಗನಾಶ್ಶೇರಿಯ ಬೆವ್‌ಕೋ ಔಟ್‌ಲೆಟ್‌ವೊಂದರಲ್ಲಿ 95.7 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದೆ. ಇದೇ ನಗರದ ಇನ್ನೊಂದು ಔಟ್‌ಲೆಟ್ನನಲ್ಲಿ 90 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದೆ. ಕೋರ್ಟ್ ಜಂಕ್ಷನ್ ಚೇರ್ತಲ ಸ್ಟೋರ್‌ನಲ್ಲಿ 93.7 ಲಕ್ಷ ರೂ. ಮತ್ತು ಪಯ್ಯನೂರು ಔಟ್‌ಲೆಟ್ನಲ್ಲಿ 91.6 ಲಕ್ಷ ರೂ.ಗಳ ಮದ್ಯ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.
ಹತ್ತು ದಿನಗಳ ಕಾಲ ನಡೆಯುವ ಓಣಂ ಹಬ್ಬದ ಒಂಬತ್ತನೇ ದಿನವಾದ ಉತ್ರಾಂ ಅನ್ನು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಕೇರಳದ ಕೆಲವು ಭಾಗಗಳಲ್ಲಿ ಓಣಂ ಹಬ್ಬ ಇದೇ ದಿನದಂದು ಪ್ರಾರಂಭವಾಗುತ್ತವೆ. ಉತ್ತರಾಮದ ದಿನದಂದು, ರಾಜ ಮಹಾಬಲಿಯ ಆಗಮನವನ್ನು ಗೌರವಿಸಲು ಜನರು ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ಆಚರಿಸಲು ಇತ್ತೀಚೆಗೆ ಕೊಯ್ಲು ಮಾಡಿದ ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ನ್ಯೂಸ್ ಮಿನಿಟ್ ವರದಿಯ ಪ್ರಕಾರ, 2022 ರಲ್ಲಿ ಓಣಂನ ಹಬ್ಬದ ದಿನಗಳಲ್ಲಿ ಒಟ್ಟು ಮದ್ಯ ಮಾರಾಟವು 624 ಕೋಟಿ ರೂ. ಆಗಿತ್ತು. 2021ರ ಇದೇ ಅವಧಿಯಲ್ಲಿ 529 ಕೋಟಿ ರೂ.ಗೆ ತಲುಪಿತ್ತು.
ಗ್ರಾಹಕರಿಗೆ ಅನುಕೂಲವಾಗುವಂತೆ ಬೆವ್ಕೋ ಮಳಿಗೆಗಳಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಿಬ್ಬಂದಿಗಳಿಗೆ ರಜೆ ನೀಡದಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಗ್ರಾಹಕರಿಗೆ ಆನ್‌ಲೈನ್ ಪಾವತಿಯ ಆಯ್ಕೆಯು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿಗಮವು ಔಟ್‌ಲೆಟ್‌ಗಳಿಗೆ ನಿರ್ದೇಶನ ನೀಡಿತ್ತು.












Click it and Unblock the Notifications