ಲಕ್ಷದ್ವೀಪದಲ್ಲಿ ಆರಂಭವಾಗಲಿವೆ ಟಾಟಾ ಸಮೂಹದ ಎರಡು ರೆಸಾರ್ಟ್‌ಗಳು, ಏನೆಲ್ಲ ವಿಶೇಷತೆಗಳಿರಲಿವೆ ಗೊತ್ತಾ?-ಮಾಹಿತಿ ತಿಳಿಯಿರಿ
ಲಕ್ಷದ್ವೀಪವು ಅತ್ಯಂತ ಸುಂದರ ಪ್ರವಾಸಿ ತಾಣವಾಗಿದೆ. ಅಲ್ಲದೆ ಇಲ್ಲಿನ ಸ್ವಚ್ಛತೆಗೆ ಎಂತಹವರೂ ಮನಸೋತುಬಿಡುತ್ತಾರೆ. ಪ್ರವಾಸಿಗರಿಗೆ ಇಲ್ಲಿದೆ ಯಾವುದೇ ಸೌಲಭ್ಯಗಳಿಗೆ ಕೊರತೆಯಿಲ್ಲ. ಹಾಗೆಯೇ ಇದೀಗ ಟಾಟಾ ಸಮೂಹಕ್ಕೆ ಸೇರಿದ ಎರಡು ರೆಸಾರ್ಟ್‌ಗಳು ಲಕ್ಷದ್ವೀಪದಲ್ಲಿ ತಲೆ ಎತ್ತಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ರೆಸಾರ್ಟ್‌ಗಳು ಯಾವಾಗ ಆರಂಭವಾಗಲಿದೆ ಹಾಗೂ ಇವುಗಳಿಗೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ಈ ರೆಸಾರ್ಟ್‌ಗಳು ತಲೆ ಎತ್ತಲಿವೆ. ಕಳೆದ ವರ್ಷದ ಜನವರಿಯಲ್ಲಿ, ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿಯು ಲಕ್ಷದ್ವೀಪದಲ್ಲಿ ಎರಡು ತಾಜ್-ಬ್ರಾಂಡ್ ರೆಸಾರ್ಟ್ ತೆರೆಯಲು ತೀರ್ಮಾನ ಮಾಡುವುದಾಗಿ ಘೋಷಣೆ ಮಾಡಿತ್ತು. ಇದನ್ನು 2026ರಲ್ಲಿ ಆರಂಭ ಮಾಡಲು ನಿರ್ಧಾರ ಮಾಡಲಾಗಿತ್ತು ಮತ್ತು ಐಎಚ್‌ಸಿಎಲ್ ಅಭಿವೃದ್ಧಿಪಡಿಸುತ್ತದೆ ಎಂದು ಕಂಪನಿ ಆ ವೇಳೆ ಮಾಹಿತಿ ನೀಡಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಬಳಿಯ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ ಮತ್ತು ಅವುಗಳನ್ನು ಪ್ರವಾಸಿ ತಾಣವಾಗಿ ಪ್ರಚಾರಗೊಳಿಸಿದ ನಂತರ ಲಕ್ಷದ್ವೀಪ ಸುದ್ದಿ ಭಾರೀ ಸದ್ದು ಮಾಡಿದೆ ಹಾಗೂ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಬಹುತೇಕ ಭಾರತೀಯರು (ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಸೇರಿ ಇನ್ನಿತರರು) ಇದನ್ನು ಮಾಲ್ಡೀವ್ಸ್‌ಗೆ ಹೋಲಿಸಿದ್ದು, ಲಕ್ಷದ್ವೀಪದ ಕಡಲತೀರಗಳು ಮಾಲ್ಡೀವ್ಸ್‌ಗಿಂತ ಸುಂದರವಾಗಿ ಕಾಣುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದರ ಬೆನ್ನಲ್ಲೇ ಲಕ್ಷದ್ವೀಪದಲ್ಲಿನ ಮೂಲಸೌಕರ್ಯಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ದ್ವೀಪ ಸಮೂಹದಲ್ಲಿ ಪ್ರವಾಸಿಗರಿಗೆ ಉತ್ತಮ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ಹೊಂದಿಲ್ಲ ಎಂಬುದು ಚರ್ಚೆಗಳಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶವಾಗುದೆ. ಇದೀಗ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಾಚೀನ ಕಡಲತೀರಗಳು ಮತ್ತು ಹವಳದ ದಿಬ್ಬಗಳನ್ನು ಹೊಂದಿರುವ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಕಳೆದ ವರ್ಷ ರೆಸಾರ್ಟ್ ಒಪ್ಪಂದಗಳಿಗೆ ಸಹಿ ಹಾಕುವ ವೇಳೆ ಐಎಚ್‌ಸಿಎಲ್ ಎಂಡಿ ಮತ್ತು ಸಿಇಒ ಪುನೀತ್ ಛತ್ವಾಲ್ ಹೇಳಿದ್ದರು ಅಂತಾ ವಿಜಯ ಕರ್ನಾಟಕ ವರದಿ ಮಾಡಿದೆ.
ಎರಡು ವಿಶ್ವ ದರ್ಜೆಯ ತಾಜ್ ರೆಸಾರ್ಟ್‌ಗಳು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಅಂತಳು ಅವರು ಹೇಳಿದ್ದರು. 36 ದ್ವೀಪಗಳ ಸಮೂಹವನ್ನು ಹೊಂದಿರುವ ಲಕ್ಷದ್ವೀಪವು ಬಂಗಾರಂ, ಅಗತ್ತಿ, ಕದ್ಮತ್, ಮಿನಿಕಾಯ್, ಕವರಟ್ಟಿ ಮತ್ತು ಸುಹೇಲಿಯಂತಹ ಅನೇಕ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಕದ್ಮತ್ ಭಾರತದ ಅತ್ಯಂತ ಸುಂದರವಾದ ಡೈವಿಂಗ್ ಕೇಂದ್ರಗಳಲ್ಲಿ ಒಂದಾಗಿದೆ.
ಇನ್ನು ಸುಹೇಲಿಯಲ್ಲಿ ತಲೆ ಎತ್ತಲಿರುವ ತಾಜ್ ರೆಸಾರ್ಟ್‌ನಲ್ಲಿ 60 ಬೀಚ್ ವಿಲ್ಲಾಗಳು ಮತ್ತು 50 ವಾಟರ್ ವಿಲ್ಲಾಗಳು ಸೇರಿದಂತೆ 110 ಕೊಠಡಿಗಳು ಇರಲಿವೆ ಎಂದು ಕಂಪನಿ ತಿಳಿಸಿದೆ. ದೊಡ್ಡ ಭೂ ಪ್ರದೇಶವನ್ನು ಹೊಂದಿರುವ ಕದ್ಮತ್ ದ್ವೀಪವು ಸಮುದ್ರ ಹುಲ್ಲು ಹಾಸುಗಳನ್ನು ಹೊಂದಿದೆ. ಇದು ಸಮುದ್ರ ಸಂರಕ್ಷಿತ ಪ್ರದೇಶವಾಗಿದ್ದು, ಇದನ್ನು ಕಾರ್ಡಮಮ್ ಐಲ್ಯಾಂಡ್ ಅಂತಳು ಕರೆಯುತ್ತಾರೆ. ಇಲ್ಲಿ 110 ಕೊಠಡಿಗಳನ್ನು ಒಳಗೊಂಡಿರುವ ತಾಜ್ ರೆಸಾರ್ಟ್ ಬರಲಿದೆ. ಇದರಲ್ಲಿ 75 ಬೀಚ್ ವಿಲ್ಲಾಗಳು ಮತ್ತು 35 ವಾಟರ್ ವಿಲ್ಲಾಗಳು ಇರಲಿವೆ.
ಲಕ್ಷದ್ವೀಪ ಅರಬ್ಬೀ ಸಮುದ್ರದಲ್ಲಿರುವ ದ್ವೀಪ ಸಮೂಹವಾಗಿದ್ದು, ಸುಂದರ ಕಡಲತೀರಗಳು, ಹವಳದ ದಿಬ್ಬಗಳು, ಖಾರಿಗಳೊಂದಿಗೆ ತನ್ನ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿ ಆಗಿದೆ. ಇದು ಸ್ಕೂಬಾ ಡೈವಿಂಗ್, ವಿಂಡ್‌ಸರ್ಫಿಂಗ್, ಸ್ನಾರ್ಕ್ಲಿಂಗ್, ಸರ್ಫಿಂಗ್, ವಾಟರ್ ಸ್ಕೀಯಿಂಗ್ ಮತ್ತು ವಿಹಾರ ನೌಕೆ ಸೇರಿದಂತೆ ಜಲ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಲಕ್ಷದ್ವೀಪದ ಅದ್ಭುತ ಪ್ರಕೃತಿ ಸೌಂದರ್ಯವನ್ನು ನೋಡಿ ವಿಸ್ಮಯಗೊಂಡಿದ್ದೇನೆ ಎಂದು ಹೇಳಿದ್ದರು. ಇಲ್ಲಿನ ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮನಮೋಹಕವಾಗಿದೆ. ತಮ್ಮ ಒಳಗಿರುವ ಸಾಹಸಿಯನ್ನು ಹೊರಹಾಕಲು ಬಯಸುವವರಿಗೆ ಲಕ್ಷದ್ವೀಪ ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದರು.












Click it and Unblock the Notifications