ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಯಾರಿಗೆ ಒಲಿಯುತ್ತೆ ಕೈ ನಾಯಕತ್ವ?
ನವದೆಹಲಿ, ಆಗಸ್ಟ್ 28: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಮತ ಎಣಿಕೆಯಾಗಿ ಹೊಸ ಅಧ್ಯಕ್ಷರ ಘೋಷಣೆ ಆಗಲಿದೆ.
ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾವಣಾ ವೇಳಾಪಟ್ಟಿಗೆ ಅನುಮೋದನೆ ಸಿಕ್ಕ ಬಳಿಕ ಮಾಧ್ಯಮಗಳಿಗೆ ಅದನ್ನು ಪ್ರಕಟಿಸಲಾಗಿದೆ.
ಆ ವೇಳಾಪಟ್ಟಿ ಪ್ರಕಾರ ಸೆಪ್ಟೆಂಬರ್ 24ರಿಂದ 30ರವರೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 1ರಂದು ನಾಮಪತ್ರ ಪರಿಶೀಲನೆ ಆಗಲಿದ್ದು, ನವೆಂಬರ್ 8ರವರೆಗೂ ನಾಮಪತ್ರ ವಾಪಸ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 17ರಂದು ಮತದಾನವಾದರೆ, 19ರಂದು ಮತ ಎಣಿಕೆಯಾಗುತ್ತದೆ.

ಸಂಕಷ್ಟದಲ್ಲಿ ಕಾಂಗ್ರೆಸ್
ಸ್ವಾತಂತ್ರ್ಯಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷ ಈಗ ಬಹಳ ಸಂಕಷ್ಟದ ಸ್ಥಿತಿಯಲ್ಲಿದೆ. ಸಾಲುಸಾಲಾಗಿ ಚುನಾವಣೆಗಳನ್ನು ಸೋಲುತ್ತಿರುವ ಕಾಂಗ್ರೆಸ್ ಪಕ್ಷ ನೇರವಾಗಿ ಅಧಿಕಾರ ಇರುವುದು ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ. ಜೊತೆಗೆ ಹಿರಿಯ ನಾಯಕರು ಸೇರಿ ಹಲವಾರು ಮಂದಿ ಕಾಂಗ್ರೆಸ್ ತೊರೆಯುತ್ತಿರುವುದು ಟ್ರೆಂಡಿಂಗ್ ಆಗಿಹೋಗಿದೆ.
ಮೊನ್ನೆ ಗುಲಾಂ ನಬಿ ಆಜಾದ್ ಕಾಂಗ್ರೆಸ್ ತೊರೆದು, ಕಪಿಲ್ ಸಿಬಲ್ ಮೊದಲಾದವರ ಪಟ್ಟಿಗೆ ಸೇರಿಕೊಂಡರು. ದಶಕಗಳ ಹಿಂದೆ ಕಾಂಗ್ರೆಸ್‌ನ ಶಕ್ತಿಕೇಂದ್ರವಾಗಿದ್ದ ಗುಲಾಂ ನಬಿ ಆಜಾದ್ ಈಗ ಆ ಪಕ್ಷದ ಸಂಕಷ್ಟದ ಪರಿಸ್ಥಿತಿಗೆ ರಾಹುಲ್ ಗಾಂಧಿ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಯಾರಾಗ್ತಾರೆ ಕಾಂಗ್ರೆಸ್ ಅಧ್ಯಕ್ಷರು?
ಇಂಥ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್‌ನ ಆಡಳಿತ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸೋನಿಯಾ ಗಾಂಧಿ ಅನಾರೋಗ್ಯಸ್ಥಿತಿಯಲ್ಲಿರುವುದರಿಂದ ಅವರಿಂದ ಆ ಸ್ಥಾನ ನಿರ್ವಹಿಸಲು ಆಗುತ್ತಿಲ್ಲ. ಸದ್ಯ ಅವರು ಎಐಸಿಸಿಯ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಹೆಚ್ಚಿವನರಿಗೆ ಗಾಂಧಿ ಕುಟುಂಬದ ಸದಸ್ಯರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಅನಿಸಿಕೆ ಹೊಂದಿರುವುದು ತಿಳಿದುಬಂದಿದೆ. ಆದರೆ, ರಾಹುಲ್ ಗಾಂಧಿ ಪಕ್ಷದ ನೊಗ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಆಸಕ್ತಿ ತೋರುತ್ತಿಲ್ಲ.
ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂಬ ಅನಿಸಿಕೆಯೂ ಆ ಪಕ್ಷದೊಳಗೆ ಇದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕೂಡ ಇದೇ ಸಲಹೆಯನ್ನು ಕೊಟ್ಟಿದ್ದರು. ಆದರೆ, ಅಂಥವರು ಯಾರಿದ್ದಾರೆ?
ಸಂಭಾವ್ಯ ಅಧ್ಯಕ್ಷರಿವರು
* ರಾಹುಲ್ ಗಾಂಧಿ
* ಪ್ರಿಯಾಂಕಾ ಗಾಂಧಿ
* ಅಶೋಕ್ ಗೆಹ್ಲೋಟ್
* ಶಶಿ ತರೂರ್
* ಮಲ್ಲಿಕಾರ್ಜುನ ಖರ್ಗೆ
* ಸಚಿನ್ ಪೈಲಟ್
ಇವರಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಮನಸು ಮಾಡಿದರೆ ಎಐಸಿಸಿ ಅಧ್ಯಕ್ಷರಾಗಲು ಸಮಸ್ಯೆ ಇಲ್ಲ. ಅವರೇ ಆ ಜವಾಬ್ದಾರಿ ಹೊರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ರಾಜಕೀಯವಾಗಿ ಬಹಳ ವರ್ಷಗಳಿಂದ ಸಕ್ರಿಯವಾಗಿರುವ ರಾಹುಲ್ ಗಾಂಧಿ ನೇರವಾಗಿ ಕೈ ಪಾಳಯವನ್ನು ಮುನ್ನಡೆಸುವುದಕ್ಕಿಂತ ಹಿಂದೆ ನಿಂತು ನಿಯಂತ್ರಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದಂತಿದೆ.

ಬಹಳ ವರ್ಷಗಳಿಂದ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಸೋನಿಯಾ ಗಾಂಧಿ ತಮ್ಮ ಮಗನಿಗೆ ಜವಾಬ್ದಾರಿ ಕೊಡಲು ಇಚ್ಛೆ ತೋರಿದ್ದರು. ಆದರೆ, ರಾಹುಲ್ ಗಾಂಧಿ ಆಸಕ್ತಿ ತೋರಲಿಲ್ಲ. ನಂತರ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋತ್ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸುವಂತೆ ಸೋನಿಯಾ ಗಾಂಧಿ ಹೇಳಿದರೆಂಬ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬಂದಿತ್ತು. ಆದರೆ, ಗೆಹ್ಲೋತ್ ಈ ಸುದ್ದಿಯನ್ನು ನಿರಾಕರಿಸಿದರಾದರೂ ಕಾಂಗ್ರೆಸ್ ಅಧ್ಯಕ್ಷರಾಗಲು ತಾನು ಆಕಾಂಕ್ಷಿ ಎಂಬುದನ್ನು ಅವರು ನಿರಾಕರಿಸಿಲ್ಲ. ಹೀಗಾಗಿ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧೆಯಲ್ಲಿರುವ ಸುದ್ದಿ ದಟ್ಟವಾಗಿದೆ.
ಕರ್ನಾಟಕದ ನಿಷ್ಠಾವಂತ ಕಾಂಗ್ರೆಸ್ ನಾಯಕರೆನಿಸಿರುವ ಹಾಗೂ ಕೇಂದ್ರ ವಿಪಕ್ಷ ನಾಯಕನಾಗಿಯೂ ಗಮನ ಸೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಸಚಿನ್ ಪೈಲಟ್ ಮತ್ತು ಕೇರಳದ ಕೈ ಮುಖಂಡ ಶಶಿ ತರೂರ್ ಹೆಸರುಗಳೂ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿವೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications