
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ಗೆ ತ್ರಿಪಾಠಿ ಸೇರ್ಪಡೆ; ಕೊನೆಗೆ ಉಳಿಯೋದು ಯಾರು ಕಣದಲ್ಲಿ?
ನವದೆಹಲಿ, ಸೆ. 30: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಶುಕ್ರವಾರ ಕೊನೆಯ ದಿನ. ಗಡುವು ಹತ್ತಿರ ಬರುತ್ತಿರುವಂತೆಯೇ ಕೆಲವೊಂದಿಷ್ಟು ನಾಟಕೀಯ ಬೆಳವಣಿಗೆಗಳಾಗಿವೆ. ಇದೇ ಹೊತ್ತಲ್ಲಿ ಅಧ್ಯಕ್ಷೀಯ ಸ್ಥಾನದ ರೇಸ್‌ಗೆ ಕೆಎನ್ ತ್ರಿಪಾಠಿ ಸೇರಿದ್ದಾರೆ.
ಮಾಜಿ ವಾಯು ಸೇನಾಧಿಕಾರಿ, ಜಾರ್ಖಂಡ್‌ನ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆಎನ್ ತ್ರಿಪಾಠಿ ತಾನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷರ ಚುನಾವಣಾ ಕಣಕ್ಕೆ ಕನ್ನಡಿಗ ಮಲ್ಲಿಕಾರ್ಜುನ್ ಖರ್ಗೆ!
ರಾಷ್ಟ್ರರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ತಮ್ಮ ನಾಮಪತ್ರ ದಾಖಲೆಗಳನ್ನು ತ್ರಿಪಾಠಿ ನೀಡಿದ್ದಾರೆ ಎನ್ನಲಾಗಿದೆ.
"ನಾನು ರೈತರ ಕುಟಂಬಕ್ಕೆ ಸೇರಿದವ. ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡಿದ ಅನುಭವ ಇರುವ, ಜಾರ್ಖಂಡ್ ಸರಕಾರದಲ್ಲಿ ಸಚಿವನಾಗಿ ಅನುಭವ ಇದ್ದವ, ಜಾರ್ಖಂಡ್ ವಿಧಾನಸಭೆಯ ಉಪನಾಯಕನಾಗಿ ಆಯ್ಕೆಯಾದ ಒಬ್ಬ ರೈತನ ಮಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ನೋಡಿ... ಪಕ್ಷದ ನಾಯಕರು ಏನೇ ನಿರ್ಧಾರ ತೆಗೆದುಕೊಂಡರೂ ಅದನ್ನು ಗೌರವಿಸುತ್ತೇನೆ" ಎಂದು ಕೆಎನ್ ತ್ರಿಪಾಠಿ ಹೇಳಿದ್ದಾರೆ.
ಇದೇ ವೇಳೆ, ಸುಮ್ಮನೆ ನಾಮಕಾವಸ್ತೆಗೆ ನಾಮಪತ್ರ ಸಲ್ಲಿಸುತ್ತಿದ್ದೀರಾ? ನಾಮಪತ್ರ ಯಾವಾಗ ವಾಪಸ್ ಪಡೆಯುತ್ತೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ತ್ರಿಪಾಠಿ "ನನ್ನನ್ನು ನೀವು ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ? ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಮುಗಿದ ಬಳಿಕ ನೋಡಿ" ಎಂದು ತಿರುಗೇಟು ನೀಡಿದ್ದಾರೆ.
"ನಮ್ಮನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾಂಗ್ರೆಸ್ ಕಾರ್ಯಕರ್ತನಾದರೂ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ಪ್ರಧಾನಿ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಾಗ ಮಾಡಿದ ಪುಣ್ಯಾತ್ಮರು ಅವರು," ಎಂದೂ ಇದೇ ವೇಳೆ ತ್ರಿಪಾಠಿ ಹೊಗಳಿದ್ದಾರೆ.

ತ್ರಿಪಾಠಿ ಪರಿಚಯ
ಕೆಎನ್ ತ್ರಿಪಾಠಿ ಭಾರತೀಯ ವಾಯುಪಡೆಯಲ್ಲಿದ್ದವರು. ಅಲ್ಲಿ ಬಿಟ್ಟ ನಂತರ ರಾಜಕೀಯಕ್ಕೆ ಅಡಿ ಇಟ್ಟರು. 2005ರಲ್ಲಿ ಜಾರ್ಖಂಡ್‌ನ ಡಾಲ್ಟನ್‌ಗಂಜ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಸೋತಿದ್ದರು.
2009ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಗೆಲುವಿನ ಸಿಹಿ ಸಿಕ್ಕಿತು. ಆಗಲೇ ಅವರನ್ನು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಹಾಗೂ ಕಾರ್ಮಿಕ ಖಾತೆಯ ಸಚಿವರನ್ನಾಗಿ ಮಾಡಲಾಯಿತು.
ಹಾಗೆಯೇ, ಕಾಂಗ್ರೆಸ್ ಪಕ್ಷದ ಅಂಗವಾದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ....
ಇದೇ ವೇಳೆ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧಿಸುವುದು ಖಚಿತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಕೂಡ ತಾನು ನಾಮಪತ್ರ ಹಾಕುವುದಾಗಿ ಹೇಳಿದ್ದಾರೆ. ಈಗ ಕೆಎನ್ ತ್ರಿಪಾಠಿಯೂ ಸೇರಿದರೆ ಒಟ್ಟು ಮೂವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಾಗುತ್ತದೆ.
ಈ ಮುಂಚೆ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಬಹಳ ಗಟ್ಟಿಯಾಗಿ ಕೇಳಿಬರುತ್ತಿತ್ತು. ಆದರೆ, ಒಬ್ಬ ವ್ಯಕ್ತಿ ಒಂದು ಹುದ್ದೆ ಎಂದು ರಾಹುಲ್ ಗಾಂಧಿ ಷರತ್ತು ವಿಧಿಸಿದ ಬಳಿಕ ಹೈಡ್ರಾಮವೇ ನಡೆದುಹೋಯಿತು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಾದರೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದು ಗೆಹ್ಲೋಟ್‌ಗೆ ಅನಿವಾರ್ಯವಾಗಿತ್ತು. ಆದರೆ, ಸಿಎಂ ಪಟ್ಟ ಬಿಟ್ಟುಕೊಟ್ಟರೆ ತಮ್ಮ ಕಡುವೈರಿ ಸಚಿನ್ ಪೈಲಟ್ ಮುಖ್ಯಮಂತ್ರಿ ಆಗಿಬಿಡುವ ಭಯ ಗೆಹ್ಲೋಟ್‌ಗೆ ಕಾಡಿತ್ತು. ಗೆಹ್ಲೋಟ್ ಬೆಂಬಲಿಗ ಶಾಸಕರು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದರು. ಇದು ಕಾಂಗ್ರೆಸ್ ವರಿಷ್ಠರಿಗೆ ಸರಿಬರಲಿಲ್ಲ. ಅಶೋಕ್ ಗೆಹ್ಲೋಟ್‌ಗೆ ಸಿಎಂ ಪಟ್ಟವೂ ಕಳೆದುಹೋಗುವ ಅಪಾಯ ಇತ್ತು. ಹಾಗೂ ಹೀಗೂ ಕ್ಷಮಾಪಣೆ ಕೋರಿ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಬಂದು ಸಿಎಂ ಪಟ್ಟ ಉಳಿಸಿಕೊಂಡರು.
ಇದಾದ ಬಳಿಕ ಹಿರಿಯ ಮುಖಂಡ ಮತ್ತು ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಅವರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುಧಾಗಿ ಹೇಳಿದ್ದರು. ಆದರೆ, ನಿನ್ನೆ ಸಂಜೆ ಅವರೂ ಕೂಡ ತಮ್ಮ ನಿರ್ಧಾರ ಹಿಂಪಡೆದುಕೊಂಡು ಅಚ್ಚರಿ ಹುಟ್ಟಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)