Lion in Beach: ಕಡಲತೀರದಲ್ಲಿ ಕಾಡಿನ ರಾಜ: ದೀರ್ಘ ವಾರಾಂತ್ಯವನ್ನು ಆನಂದಿಸಿದ ಸಿಂಹ!
ಇತ್ತೀಚೆಗೆ ಗುಜರಾತಿನ ಕಡಲತೀರದಲ್ಲಿ ಅಚ್ಚರಿಯ ದೃಶ್ಯವೊಂದು ಕಂಡುಬಂದಿದೆ. ಅಲ್ಲಿ ಏಷ್ಯನ್ ಸಿಂಹವೊಂದು ಅಲೆಗಳನ್ನು ಆನಂದಿಸುತ್ತಿರುವುದನ್ನು ಜನ ಕಂಡಿದ್ದಾರೆ. ಕೆಲವೇ ಸಮಯದಲ್ಲಿ ಜನ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜನರು ಕಾಡಿನಲ್ಲಿ ಸಿಂಹವನ್ನು ಸಾಕಷ್ಟು ಬಾರಿ ನೋಡಿದ್ದರೂ, ಸಮುದ್ರದ ನೀರಿನಲ್ಲಿ ಅದನ್ನು ನೋಡುವುದು ಅದ್ಭುತವೇ ಸರಿ.
ಜುನಾಗಢದ ಕಡಲತೀರದಲ್ಲಿ ಕಾಡಿನ ರಾಜ ದೀರ್ಘ ವಾರಾಂತ್ಯವನ್ನು ಆನಂದಿಸಿದ್ದಾನೆ ಎಂಬ ಶೀರ್ಷಿಕೆಯ ಮೂಲಕ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಈ ಸಿಂಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜುನಾಗಢ್ ಪಕ್ಕದಲ್ಲಿರುವ ಅರಬ್ಬಿ ಸಮುದ್ರದ ಬಳಿ ಈ ಸಿಂಹ ಕಾಣಿಸಿಕೊಂಡಿದೆ ಎಂದು ಅವರು ಬರೆದಿದ್ದಾರೆ. ಅಲ್ಲಿ ಆ ಸಿಂಹ ಸುಂದರವಾದ ಅಲೆಗಳನ್ನು ಆನಂದಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ಅವರು ಸಮುದ್ರ ತೀರದಲ್ಲಿ ವಾಸಿಸುವ ಹುಲಿಗಳಿಗೆ ಸಂಬಂಧಿಸಿದ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಕಸ್ವಾನ್ ಪ್ರಕಾರ, ಈ ಫೋಟೋವನ್ನು ಜುನಾಗಢ್‌ನ ಸಿಸಿಎಫ್ ತೆಗೆದಿದ್ದಾರೆ. ಸದ್ಯ ಅವರ ಪೋಸ್ಟ್‌ಗೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. ಹಾಗಾದರೆ ನೆಟ್ಟಿಗರು ಈ ಫೋಟೋಗೆ ಏನೆಂದು ಕಾಮೆಂಟ್ ಮಾಡಿದ್ದಾರೆ ನೋಡಿ....
*'ಬಡ ಸಿಂಹವು ತನ್ನ ದಿನನಿತ್ಯದ ಜೀವನದಿಂದ ಬೇಸತ್ತಿದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
*ಮತ್ತೊಬ್ಬರು 'ರಜೆ ಕಳೆಯಲು ಬೀಚ್‌ಗೆ ಸಿಂಹ ಬಂದಿದೆ' ಎಂದು ಬರೆದಿದ್ದಾರೆ.
*'ಭಾನುವಾರವನ್ನು ಆನಂದಿಸುತ್ತಿದೆ' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
*'ಅವರು ದೀರ್ಘ ವಾರಾಂತ್ಯಕ್ಕೆ ಬೀಚ್‌ಗೆ ಹೋಗಿದ್ದಾರೆ. ರಜೆ ಮುಗಿದ ಕೂಡಲೇ ಕಾಡಿಗೆ ಮರಳುತ್ತಾರೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಆದರೆ ಈ ಫೋಟೋ ನಿಜ ಎಂದು ಹಲವರು ನಂಬಿರಲಿಲ್ಲ. ಈ ಫೋಟೋ ನಾರ್ನಿಯಾ ಚಿತ್ರದ ಸ್ಕ್ರೀನ್‌ಶಾಟ್ ಎಂದು ಕೆಲವರು ಭಾವಿಸಿದ್ದರು. ಜುನಾಗಢದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಫೋಟೋ ತೆಗೆದಿದ್ದಾರೆ ಎಂದು ಐಎಫ್‌ಎಸ್ ಅಧಿಕಾರಿ ಹೇಳಿದಾಗ ಮಾತ್ರ ಈ ದೃಶ್ಯ ನಿಜವೆಂದು ಹಲವರು ನಂಬಿದ್ದಾರೆ.
ಗುಜರಾತ್ ನಲ್ಲಿ 674ಕ್ಕೂ ಹೆಚ್ಚು ಸಿಂಹಗಳು
ಸಿಂಹಗಳನ್ನು ಉಳಿಸಲು ಗುಜರಾತ್‌ನ ಜುನಾಗಢದಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಲಾಗಿದೆ. 2020 ರ ಜನಗಣತಿಯ ಪ್ರಕಾರ ಅಲ್ಲಿ 674 ಕ್ಕೂ ಹೆಚ್ಚು ಸಿಂಹಗಳಿವೆ. 2025ರಲ್ಲಿ ಮತ್ತೆ ಎಣಿಕೆ ನಡೆಯಲಿದೆ. ಆಗ ಅದರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.
2015ರ ಜನಗಣತಿ ಪ್ರಕಾರ ಗುಜರಾತ್‌ನಲ್ಲಿ 523 ಸಿಂಹಗಳಿದ್ದು, ಗಿರ್ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಜುನಾಗಢ ಹಾಗೂ ಸುತ್ತಮುತ್ತಲ ಜಿಲ್ಲೆಗಳಾದ ಅಮ್ರೇಲಿ, ಭಾವನಗರ, ಗಿರ್ ಸೋಮನಾಥ್ ಹಾಗೂ ಪೋರಬಂದರ್‌ನ ಸುಮಾರು 1500 ಗ್ರಾಮಗಳ ಬಳಿ ಸಿಂಹಗಳು ವಾಸ ಮಾಡುತ್ತಿವೆ.












Click it and Unblock the Notifications