
ಅಳುವ ಮಕ್ಕಳ ಕಿರಿಕಿರಿ ತಪ್ಪಿಸಲು ಕೇರಳ ಚಿತ್ರಮಂದಿರಗಳಲ್ಲಿ 'ಕ್ರೈ ರೂಮ್'
ಕೇರಳದ ಚಿತ್ರ ಮಂದಿರಗಳಲ್ಲಿ ವೀಕ್ಷಕರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆಯನ್ನು ತರಲಾಗಿದೆ. ಕೇರಳದ ಸರ್ಕಾರಿ ಸ್ವಾಮ್ಯದ ಚಲನಚಿತ್ರ ಮಂದಿಗಳು ಇನ್ಮುಂದೆ ಧ್ವನಿ ನಿರೋಧಕ 'ಅಳುವ ಕೋಣೆ'ಯನ್ನು ಹೊಂದಿರಲಿವೆ. ಮಕ್ಕಳಿರುವ ಪೋಷಕರು ಹಾಗೂ ಇನ್ನಿತರ ವೀಕ್ಷಕರಿಗೆ ತೊಂದರೆಯಾಗದಂತೆ ಥಿಯೇಟರ್‌ಗಳಲ್ಲಿ ಪ್ರತ್ಯೇಕ ಆಸನಗಳನ್ನು ಏರ್ಪಡಿಸಲಾಗಿದೆ. ಈ ಧ್ವನಿ-ನಿರೋಧಕ ಕೋಣೆಗಳಲ್ಲಿರುವ ಆಸನದಲ್ಲಿ ಪುಟ್ಟ ಮಕ್ಕಳಿರುವ ಪೋಷಕರು ಕುಳಿತುಕೊಳ್ಳುತ್ತಾರೆ. ಇದರಿಂದ ವೀಕ್ಷಕರಿಗೆ ಕಿರಿಕಿರಿಯಾಗದಂತೆ ಸಿನಿಮಾವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ಕೇರಳದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿಎನ್ ವಾಸವನ್ ಅವರು ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿರುವ ಕೈರಲಿ-ಶ್ರೀ-ನಿಲಾ ಥಿಯೇಟರ್ ಸಂಕೀರ್ಣದಲ್ಲಿ ಸ್ಥಾಪಿಸಲಾದ ಕೋಣೆಯ ಫೋಟೋಗಳನ್ನು ಸೋಮವಾರ ಹಂಚಿಕೊಂಡಿದ್ದಾರೆ. "ಅಳುವ ಕೋಣೆ" ಡೈಪರ್ ಬದಲಾಯಿಸುವ ಸೌಲಭ್ಯವನ್ನೂ ಹೊಂದಿದೆ. ಪುಟ್ಟ ಮಕ್ಕಳಿರುವ ಪೋಷಕರು ಈ ಕೊಠಡಿಯೊಳಗೆ ಆರಾಮವಾಗಿ ಚಲನಚಿತ್ರವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರದ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (KSFDC) ರಾಜ್ಯದ ಇತರ ಚಿತ್ರಮಂದಿರಗಳಲ್ಲಿ ಇಂತಹ "ಕ್ರೈ ರೂಮ್" ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ ಎಂದು ಸಚಿವರು ಹೇಳಿದರು.
"ತಮ್ಮ ಮಕ್ಕಳನ್ನು ಥಿಯೇಟರ್‌ಗೆ ಕರೆತರುವ ಪಾಲಕರು ಚಿತ್ರವನ್ನು ಆನಂದಿಸುವುದು ಅಪರೂಪ. ಥಿಯೇಟರ್‌ನೊಳಗಿನ ಕತ್ತಲೆ, ಶಬ್ದಗಳು ಮತ್ತು ಲೈಟ್‌ನಿಂದಾಗಿ ಮಕ್ಕಳು ಆಗಾಗ್ಗೆ ಅಳಲು ಆರಂಭಿಸುತ್ತವೆ. ಶೌಚಾಲಯಕ್ಕೂ ಹೋಗಬಹುದು. ಇದರಿಂದ ಪೋಷಕರು ಹೊರಗೆ ಹೆಜ್ಜೆ ಹಾಕಬೇಕಾಗುತ್ತದೆ "ಎಂದು ವಾಸವನ್ ಫೇಸ್‌ಬುಕ್‌ನಲ್ಲಿ ಮಲಯಾಳಂನಲ್ಲಿ ಬರೆದಿದ್ದಾರೆ.
ಈ ವ್ಯವಸ್ಥೆ ಸರ್ಕಾರ ನಡೆಸುವ ಚಿತ್ರಮಂದಿರಗಳನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದರು.