ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿದೇಶದಲ್ಲಿ ಮರಣದಂಡನೆ: ಸದ್ಯದ ಅಪ್ಡೇಟ್ ಏನು?
ಯೆಮನ್ ಪ್ರಜೆಯೊಬ್ಬನ ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಾದ ರೀತಿಯಲ್ಲಿ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಯೆಮನ್ ಪ್ರಜೆಯೊಬ್ಬನ ಕೊಲೆ ಮಾಡಿದ ಪ್ರಕರಣದಲ್ಲಿ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದ್ದು, ಇನ್ನು ಒಂದು ತಿಂಗಳ ಒಳಗೆ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಾಯಕ್ಕೆ ಮುಂದಾಗಿದೆ.
ಈ ಬಗ್ಗೆ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, 'ಯೆಮೆನ್‌ನಲ್ಲಿ ಶ್ರೀಮತಿ ನಿಮಿಷಾ ಪ್ರಿಯಾ ಅವರಿಗೆ ಶಿಕ್ಷೆ ವಿಧಿಸುವ ಬಗ್ಗೆ ನಮಗೆ ತಿಳಿದಿದೆ. ಪ್ರಿಯಾ ಅವರ ಕುಟುಂಬವು ಸಂಬಂಧಿತ ಆಯ್ಕೆಗಳನ್ನು ಕಂಡುಕೊಳ್ಳುತ್ತಿದೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ'ಎಂದು ಹೇಳಿದ್ದಾರೆ.

ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದ ಮೇಲೆ 2017ರಿಂದ ನಿಮಿಷಾ ಯೆಮೆನ್‌ನಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಕುಟುಂಬಸ್ಥರು ಆಕೆಯ ಬಿಡುಗಡೆಗೆ ಎಷ್ಟೇ ಪ್ರಯತ್ನಪಟ್ಟರೂ ಸಹ ಸಾಧ್ಯವಾಗುತ್ತಿಲ್ಲ. ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರತರುವುದು ಅಥವಾ ಶಿಕ್ಷೆಯಿಂದ ತಪ್ಪಿಸುವುದು ಕಷ್ಟ ಎಂದು ವರದಿಯಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಕೇರಳ ಮೂಲಕದ ನಿಮಿಷಾ ಪ್ರಿಯಾ 2011ರಲ್ಲಿ ಯೆಮೆನ್‌ಗೆ ತೆರಳಿದರು. ನಿಮಿಷಾ ಪ್ರಿಯಾ ಯೆಮೆನ್‌ನ ಸನಾದಲ್ಲಿ ಕ್ಲಿನಿಕ್‌ವೊಂದನ್ನು ಸ್ಥಾಪಿಸಲು ಮುಂದಾಗಿದ್ದರು. ಈ ವೇಳೆ ಅಲ್ಲಿನ ಪ್ರಜೆ ಮಹದಿ ಎನ್ನುವಾತನ ಸಹಾಯ ಪಡೆದು, ಆತನ ಪಾಲುದಾರಿಕೆಯಲ್ಲೇ ಕ್ಲಿನಿಕ್ ಆರಂಭಿಸಿದರು. ಯೆಮೆನ್ ಕಾನೂನಿನ ಪ್ರಕಾರ ವಿದೇಶಿ ಪ್ರಜೆಗಳು ಸ್ಥಳೀಯ ಪಾಲುದಾರಿಗೆಯನ್ನು ಹೊಂದಿರಬೇಕು. ಈ ವಿಚಾರವೇ ನಿಮಿಷಾ ಪ್ರಿಯಾ ಮಹದಿಯ ಸಹಾಯ ಪಯಲು ಪ್ರಮುಖ ಕಾರಣವಾಯಿತು.
ಮೊದಮೊದಲು ಚೆನ್ನಾಗಿದ್ದ ನಿಮಿಷಾ ಪ್ರಿಯಾ ಹಾಗೂ ಮಹದಿ ಸಂಬಂಧ ಬರಬರುತ್ತಾ ಹದಗೆಟ್ಟಿದ್ದು, ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಜೋರಾಯಿತು. ನಂತರ ಮಹದಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಲ್ಲೇ ಆಕೆಯ ಪಾಸ್‌ಪೋರ್ಟ್ ಪಡೆದುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ವಾಪಸ್ ಭಾರತಕ್ಕೂ ಮರಳಲು ಆಗದೇ ಆತನ ಕಿರುಕುಳ ಸಹಿಸಲು ಆಗದೇ ರೋಸಿ ಹೋಗಿದ್ದ ನಿಮಿಷಾ ಪ್ರಿಯಾ ಅಮಲು ಚುಚ್ಚುಮದ್ದು ನೀಡಿ ಆತನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಇದೀಗ ಈ ಶಿಕ್ಷೆಗೆ ಯೆಮನ್ ಅಧ್ಯಕ್ಷರು ಕೂಡ ಅಧಿಕೃತ ಮುದ್ರೆಯೊತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications