ಕೇರಳ ನರಬಲಿ ಪ್ರಕರಣ: ಮೂವರೂ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ
ಪತ್ತನಂತಿಟ್ಟ ಅಕ್ಟೋಬರ್ 12: ಕೇರಳ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರೂ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೇರಳದ ಪತ್ತನಂತಿಟ್ಟಾ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ನರಬಲಿಗಾಗಿ ಇಬ್ಬರು ಮಹಿಳೆಯರನ್ನು ಕೊಂದ ಆರೋಪದ ಮೇಲೆ ಮೂವರನ್ನು ಸ್ಥಳೀಯ ನ್ಯಾಯಾಲಯ ಬುಧವಾರ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಸಂಪತ್ತು ಮತ್ತು ಸಮೃದ್ಧಿ ಪಡೆಯಲು ದಂಪತಿ ಸೇರಿದಂತೆ ಮೂವರು ಕೇರಳದ ದೂರದ ಹಳ್ಳಿಯೊಂದರಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಬಲಿ ನೀಡಿರುವುದನ್ನು ದಂಪತಿ ಹಾಗೂ ಏಜೆಂಟ್ ಒಪ್ಪಿಕೊಂಡಿದ್ದಾರೆ. ಬಲಿಯಾದ ಪದ್ಮಾ ಮತ್ತು ರೋಸ್ಲಿನ್ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ ಹಿತ್ತಲಿನಲ್ಲಿ ಹೂಳಲಾಗಿರುವುದು ಬಯಲಾಗಿದೆ. ಮಾಂತ್ರಿಕ ಆಚರಣೆಯ ಭಾಗವಾಗಿ ಗೋಡೆಗಳು ಮತ್ತು ನೆಲದ ಮೇಲೆ ರಕ್ತ ಚೆಲ್ಲಲಾಗಿರುವುದು ಬೆಳಕಿಗೆ ಬಂದಿದೆ. ಜೊತೆಗೆ ದೇಹದ ಕೆಲ ಭಾಗಗಳನ್ನು ಸೇವಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಎಳಂತೂರಿನಲ್ಲಿ ನಡೆದ ನರಬಲಿ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಬುಧವಾರ (ಅಕ್ಟೋಬರ್ 12) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮಾಂತ್ರಿಕ ಪೆರುಂಬವೂರು ವೆಂಗೊಳ ವೆಝಾಪಿಲ್ಲಿ ನಿವಾಸಿ ಮುಹಮ್ಮದ್ ಶಾಫಿ (52), ಪತ್ತನಂತಿಟ್ಟ ಎಳಂತೂರ್ ಕರಂವೇಲಿ ಕಡಂಪಲ್ಲಿ ನಿವಾಸಿ ಭಗವಲ್ ಸಿಂಗ್ (68) ಮತ್ತು ಅವರ ಎರಡನೇ ಪತ್ನಿ ಲೈಲಾ ಬಂಧಿತರು. ಮಧ್ಯಾಹ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಕಾಲಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ರೋಸ್ಲಿ (49) ಮತ್ತು ಧರ್ಮಪುರಿಯ ಪದ್ಮಾ (52) ಕೊಲೆಯಾದವರು. ಜೂನ್ 8 ರಂದು ರಾತ್ರಿ ರೋಸ್ಲಿ ಮತ್ತು ಸೆಪ್ಟೆಂಬರ್ 26 ರಂದು ಪದ್ಮಾ ಹತ್ಯೆಯಾಗಿದ್ದು, ಆರೋಪಿಗಳ ಸಮ್ಮುಖದಲ್ಲಿ ನಿನ್ನೆ ಮೃತದೇಹಗಳನ್ನು ಹೊರತೆಗೆಯಲಾಯಿತು.

ಪದ್ಮಾ ಅವರ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿದ್ದು. ಆಕೆಯ ದೇಹವನ್ನು ಗುರುತಿಸಲು ಮಗನಿಗೆ ಸಾಧ್ಯವಾಗಲಿಲ್ಲ. ರೋಸ್ಲಿ ಅವರ ಅಸ್ಥಿಪಂಜರ ಮಾತ್ರ ಪತ್ತೆಯಾಗಿದೆ. ಆಕೆಯ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಲಾಗಿದೆ. ದೇಹದ ಭಾಗಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಡಿಎನ್‌ಎ ಪರೀಕ್ಷೆ ಮುಗಿದ ನಂತರ ಮೃತದೇಹಗಳನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ನಂತರ ಎಳಂತೂರಿನ ಭಗವಾಲ್ ಸಿಂಗ್ ಅವರ ಮನೆಯಿಂದ ಸಾಕ್ಷ್ಯ ಸಂಗ್ರಹಿಸಲಾಗುವುದು. ವಿಧಿವಿಜ್ಞಾನ ತಂಡ ಹಾಗೂ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ವಿವರವಾಗಿ ತನಿಖೆ ನಡೆಸಲಿದ್ದಾರೆ.












Click it and Unblock the Notifications