ಕೇರಳ ವಿಧಾನಸಭೆ ಚುನಾವಣೆಗೆ 55 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ | Kerala Assembly Elections 2026
ದೇಶದಲ್ಲಿ ಮತ್ತೊಮ್ಮೆ ಚುನಾವಣೆಯ ಕಾವು ರಂಗೇರಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ಕೂಡ ನಡೆಯಲಿದೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಪುದುಚೇರಿಯ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ ತಮಿಳುನಾಡು ಹಾಗೂ ಕೇರಳದ ಚುನಾವಣೆ ಭಾರಿ ಗಮನ ಸೆಳೆದಿದ್ದು, ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಇಲ್ಲಿ ನೇರವಾಗಿಯೇ ಪೈಪೋಟಿ ಶುರುವಾಗಿದೆ. ಸೋಲು & ಗೆಲುವಿನ ಲೆಕ್ಕಾಚಾರಕ್ಕಿಂತ ಪ್ರತಿಷ್ಠೆಯ ಪಣವಾಗಿ ಮಾರ್ಪಟ್ಟಿದೆ ತಮಿಳುನಾಡು ಹಾಗೂ ಕೇರಳ ವಿಧಾನಸಭೆ ಚುನಾವಣೆ ಅಖಾಡ. ಹೀಗಿದ್ದಾಗ ಕೇರಳ ಚುನಾವಣೆಗಾಗಿ ತನ್ನ ಮೊದಲ ಪಟ್ಟಿಯನ್ನು ಕಾಂಗ್ರೆಸ್ ನಾಯಕರು ಇದೀಗ ರಿಲೀಸ್ ಮಾಡಿದ್ದಾರೆ.
ಕೇರಳ ವಿಧಾನಸಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಮೊದಲನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಳೆದು & ತೂಗಿ 55 ಹೆಸರನ್ನ ಫೈನಲ್ ಮಾಡಿದೆ. ಒಟ್ಟು 140 ಸದಸ್ಯ ಬಲ ಇರುವ ವಿಧಾನಸಭೆ ಅಖಾಡದಲ್ಲಿ, ವಿರೋಧ ಪಕ್ಷಗಳ ಮೈತ್ರಿ ಯುಡಿಎಫ್‌ನ ಪ್ರಮುಖ ಭಾಗ ಕಾಂಗ್ರೆಸ್ ಸುಮಾರು 90 ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಾಗಿದೆ. ಇದೇ ಕಾರಣಕ್ಕೆ ತನ್ನ ಮೊದಲ ಪಟ್ಟಿಯಲ್ಲಿ ಒಟ್ಟು 55 ಹೆಸರನ್ನು ಬಿಡುಗಡೆ ಮಾಡಿದ್ದು, ಇನ್ನುಳಿದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲನೇ ಪಟ್ಟಿಯಲ್ಲಿ, ಪ್ರಮುಖವಾಗಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಮಾಜಿ ವಿಪಕ್ಷ ನಾಯಕ ರಮೇಶ್, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಮಾಜಿ ಅಧ್ಯಕ್ಷ ಕೆ. ಮುರಳೀಧರನ್ & ಉಪಾಧ್ಯಕ್ಷ ಪಿ.ಸಿ. ವಿಷ್ಣುನಾಥ್ ಹೆಸರು ಇದೆ.

ದಕ್ಷಿಣದ ರಾಜ್ಯದಲ್ಲಿ ಭರ್ಜರಿ ಪೈಪೋಟಿ
ಕೇರಳ ರಾಜ್ಯದಲ್ಲಿ ಬಿಜೆಪಿ ನಾಯಕರು ಈಗಾಗಲೇ ದೊಡ್ಡ ಮಟ್ಟದಲ್ಲಿ ರಣತಂತ್ರ ರೂಪಿಸಿದ್ದು, ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಶಪಥ ಮಾಡಿದ್ದಾರೆ. ಹೀಗಿದ್ದಾಗ ಕಾಂಗ್ರೆಸ್ ಕೂಡ ಕೇರಳ ರಾಜ್ಯದ ಗೆಲುವಿಗೆ ಸರ್ಕಸ್ ಮಾಡಬೇಕಾಗಿ ಬಂದಿದ್ದು, ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ. ಏಕೆಂದರೆ, ಈಗಾಗಲೇ ದೇಶದಲ್ಲಿ ಬಹುತೇಕ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಒದ್ದಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಕೇರಳ ರಾಜ್ಯದಲ್ಲಿನ ಗೆಲುವು ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ತಮ್ಮ ಜೊತೆ ಕೈಜೋಡಿಸಿರುವ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಪರ್ಧೆ ಮಾಡಲಿರುವ ಸ್ಥಾನಗಳಲ್ಲಿ ಕೂಡ ಹಂಚಿಕೆ ಮಾಡಿಕೊಂಡಿದೆ ಕಾಂಗ್ರೆಸ್. ಈ ಹಿನ್ನೆಲೆಯಲ್ಲಿ ಇದೀಗ ಮೊದಲ ಪಟ್ಟಿ ಬಿಡುಗಡೆ ಆಗಿದೆ ಕಾಂಗ್ರೆಸ್ ಪಕ್ಷದಿಂದ.












Click it and Unblock the Notifications