ಸೆಲ್ಫಿ ತೆಗೆದುಕೊಳ್ಳುವಾಗ ನದಿ ನೀರಿನಲ್ಲಿ ಸಿಕ್ಕಿಕೊಂಡ ಕೇದಾರನಾಥ ಯಾತ್ರಿಕ: ವಿಡಿಯೋ
ಡೆಹ್ರಾಡೂನ್ ಸೆಪ್ಟೆಂಬರ್ 5: ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಟ್ರೆಕ್ಕಿಂಗ್ ಮಾರ್ಗದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯಾತ್ರಾರ್ಥಿಯೊಬ್ಬರು ಹರಿಯುವ ನದಿಗೆ ಜಾರಿ ಬಿದಿದ್ದಾರೆ. ಅವರು ದೇಗುಲಕ್ಕೆ ತೆರಳುತ್ತಿದ್ದಾಗ ರಾಮಬಾಡ ಬಳಿ ಈ ಘಟನೆ ಸಂಭವಿಸಿದೆ.
ಮಂದಾಕಿನಿ ನದಿಯಲ್ಲಿ ಏಕಾಏಕಿ ನೀರಿನ ಪ್ರವಾಹ ಹೆಚ್ಚಾಗಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯಾತ್ರಿಯೊಬ್ಬ ಸಿಲುಕಿಕೊಂಡಿದ್ದಾನೆ. ಕೆಲವು ಬಂಡೆಗಳ ಮೇಲೆ ನಿಂತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಕ್ಷಣ ಅವರ ಸ್ನೇಹಿತರು ಮತ್ತು ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.

ನೀರಿನ ನಡುವೆ ಇರುವ ಬಂಡೆ ಮೇಲೆ ನಿಂರ ವ್ಯಕ್ತಿಯನ್ನು ತಲುಪಲು ಹಗ್ಗಗಳನ್ನು ಬಳಸಿರುವುದನ್ನು ವಿಡಿಯೋ ತೋರಿಸುತ್ತದೆ. ನಂತರ ವ್ಯಕ್ತಿಯನ್ನು ರಕ್ಷಿಸಲಾಯಿತು. ಈ ಸೆಲ್ಫಿ ಹುಚ್ಚಾಟ ಕೇವಲ ನೀರಿನೊಂದಿಗೆ ನಡೆಯುತ್ತಾ ಅಂದರೆ ಅದು ಸುಳ್ಳು. ಯಾಕೆಂದರೆ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಜ್ವಾಲಾಮುಖಿಯೊಂದಿಗೆ ಜನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಜ್ವಾಲಾಮುಖಿಯೊಂದಿಗೆ ಸೆಲ್ಫಿ
ಜ್ವಾಲಾಮುಖಿ ಸ್ಫೋಟದ ಮುನ್ಸೂಚನೆ ತಿಳಿಯುತ್ತಿದ್ದಂತೆ ಆ ಪ್ರದೇಶದ ಸುತ್ತ ಮುತ್ತ ಜನ ವಾಸಿಸುವುದು ಒಂದು ಕಡೆ ಇರಲಿ ಪ್ರಾಣಿ-ಪಕ್ಷಿಗಳೂ ಸುಳಿದಾಡುವುದಿಲ್ಲ. ಯಾಕೆಂದರೆ ಬೆಂಕಿಯ ಜ್ವಾಲೆ ಸ್ಪೋಟದ ತೀವ್ರತೆ ಆ ಮಟ್ಟದ್ದಾಗಿರುತ್ತದೆ. ಬೆಂಕಿ ಜ್ವಾಲೆ ಆವರಿಸಿಬಿಟ್ಟರೆ ಮುಗಿತು ಉಳಿದುಕೊಳ್ಳುವ ಮಾತೇ ಇಲ್ಲ. ಹೀಗಿರುವಾಗ ಇಲ್ಲೊಂದು ವೈರಲ್ ವಿಡಿಯೋದಲ್ಲಿ ಜನರ ಗುಂಪೊಂದು ಜ್ವಾಲೆಯ ಸ್ಪೋಟವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇತ್ತೀಚೆಗೆ ವೈರಲ್ ಆದ ಈ ವಿಡಿಯೋವನ್ನು ಕಂಡು ಜನ ಒಂದು ಕ್ಷಣ ದಂಗಾಗಿದ್ದರು. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.
ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಗೊತ್ತಾ? ಒಂದು ಎತ್ತರದ ಬೆಟ್ಟದ ತುದಿಯಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುತ್ತದೆ. ಅದೇ ಬೆಟ್ಟಕ್ಕೆ ಹತ್ತಿರದಲ್ಲಿ ಮತ್ತೊಂದು ಬೆಟ್ಟದ ತುದಿಯ ಮೇಲೆ ನಿಂತ ಜನ ವಿಡಿಯೋ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಕೆಲವರು ಸ್ಪೋಟದ ತೀವ್ರತೆಯನ್ನು ನೋಡಿ ಆಶ್ಚರ್ಯದಿಂದ ಕಿರುಚಾಡುತ್ತಾರೆ. ಕತ್ತಲೆಯಲ್ಲಿ ಜ್ವಾಲೆಯ ಸ್ಪೋಟ ನೋಡುಗರನ್ನು ಬೆರಗುಗೊಳಿಸಿದೆ. ಜ್ವಾಲೆ ಸ್ಪೋಟಗೊಳ್ಳುತ್ತಿದ್ದಂತೆ ಜ್ವಾಲೆ ಬೆಟ್ಟವನ್ನೆ ಆವರಿಸುತ್ತದೆ. ಅಲ್ಲಲ್ಲಿ ಬೆಂಕಿಯ ಕಿಡಿ ನಕ್ಷತ್ರದಂತೆ ಗೋಚರಿಸುತ್ತದೆ. ಇದೊಂದು ಅದ್ಭುತದ ಜೊತೆಗೆ ಅಪಾಯಕಾರಿ ದೃಶ್ಯವೂ ಹೌದು. ಆದರೆ ಈ ಜ್ವಾಲೆಯ ಕಿಡಿ ಅಥವಾ ಬೆಂಕಿಯ ಉಂಡೆಗಳು ಜನರಿರುವ ಬೆಟ್ಟದ ಕಡೆಗೆ ಹಾರುವುದಿಲ್ಲ. ಹೀಗಾಗಿ ಜನ ಯಾವುದೇ ಅಪಾಯ ಆತಂಕವಿಲ್ಲದೆ ಜ್ವಾಲೆ ಸ್ಪೋಟವನ್ನು ಕಣ್ತುಂಬಿಕೊಂಡಿದ್ದಾರೆ.
ಜಲಪಾತದ ಬಳಿ ಫೋಟೋ ಪೋಸ್ ಕೊಡಲು ಹೋಗಿ ಯುವಕ ಸಾವು: ವಿಡಿಯೋ
ಈ ಹಿಂದೆ ಜಲಪಾತದ ಬಳಿ ಫೋಟೋ ಪೋಸ್ ಕೊಡಲು ಹೋಗಿ ಯುವಕ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ನಡೆದಿತ್ತು. ಫೋಟೋಗೆ ಪೋಸು ಕೊಡುತ್ತಿದ್ದ ಯುವಕನೊಬ್ಬ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಅಂದಹಾಗೆ ಈ ಘಟನೆ ಆಗಸ್ಟ್ 3ರ ಬುಧವಾರ ನಡೆದಿದೆ. 28 ವರ್ಷದ ಯುವಕ ಅಜಯ್ ಪಾಂಡಿಯನ್ ಜಲಪಾತದ ಬಳಿ ನಿಂತು ಫೋಟೋಗೆ ಪೋಸು ನೀಡುತ್ತಿದ್ದ. ಜಲಪಾತದ ಬಂಡೆಗಳ ಮೇಲೆ ನಿಂತು ತನ್ನ ಸ್ನೇಹಿತನಿಗೆ ಫೋಟೋ ತೆಗೆಯಲು ಹೇಳಿದ್ದಾನೆ. ಈ ವೇಳೆ ಆತನ ಸ್ನೇಹಿತ ಹುಷಾರು.. ಹುಷಾರು.. ಎಂದು ಹೇಳಿದ್ದಾನೆ. ಬಂಡೆಗಳ ಮೇಲೆ ಪಾಚಿ ಕಟ್ಟಿದ್ದರಿಂದ ಆತನ ಕಾಲು ಜಾರಿ ತುಂಬಿ ಹರಿಯುತ್ತಿದ್ದ ಜಲಪಾತಕ್ಕೆ ಬಿದ್ದಿದ್ದಾನೆ. ಇಡೀ ಘಟನೆಯ ವಿಡಿಯೋವನ್ನು ಆತನ ಸ್ನೇಹಿತ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಭಯಾನಕವಾಗಿದೆ.












Click it and Unblock the Notifications