ರಾಹುಲ್ ಗಾಂಧಿಯನ್ನು 'ಬಫೂನ್' ಎಂದ ಕೆಸಿಆರ್ ವಿರುದ್ಧ ಆಕ್ರೋಶ
ನವದೆಹಲಿ, ಸೆಪ್ಟೆಂಬರ್ 7: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೇಶದ ಅತಿ ದೊಡ್ಡ ಬಫೂನ್ ಎಂದು ಲೇವಡಿ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೆಸಿಆರ್ ಅವರ ಹೇಳಿಕೆ ಅಭಿರುಚಿಹೀನವಾದದ್ದು. ಕೆಸಿಆರ್ ಒಬ್ಬ ಕೃತಜ್ಞತೆ ಇಲ್ಲದ ಮನುಷ್ಯ. ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದ ಎಲ್ಲ ಒತ್ತಡಗಳ ನಡುವೆಯೂ ಅವರ ಜತೆ ನಿಂತ ಕಾಂಗ್ರೆಸ್ ನಾಯಕತ್ವ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸುವ ಬದಲು, ಮುಖ್ಯಮಂತ್ರಿ ಸ್ಥಾನದ ಘನತೆಗೆ ವಿರುದ್ಧವಾಗಿ ವರ್ತಿಸಿದ್ದಾರೆ.
ಅವರಿಗೆ ತಾವು ಗೆಲ್ಲುತ್ತೇವೆ ಎಂದು ಭರವಸೆ ಇದ್ದು ಚುನಾವಣೆಗೆ ಹೋದರೆ ಅದು ಅವರ ಇಷ್ಟ. ಅವರ ನೇತೃತ್ವದ ಸರ್ಕಾರ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂದು ಮತದಾರರಿಗೆ ಗೊತ್ತು. ಅವರು ರಾಜ್ಯದ ಸಂಪನ್ಮೂಲಗಳನ್ನು ಲೂಟಿ ಮಾಡಿ, ಜನರನ್ನು ವಂಚಿಸಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆರೋಪಿಸಿದ್ದಾರೆ.

ಕೆಸಿಆರ್ ಅವರ ಹೇಳಿಕೆ ಅವರಲ್ಲಿನ ಹೊಲಸು ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಎನ್‌ಸಿಪಿ ಮುಖಂಡ ತಾರಿಖ್ ಅನ್ವರ್ ಟೀಕಿಸಿದ್ದಾರೆ.
'ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಕಟುವಾದ ಹೇಳಿಕೆ ಬಂದಿರುವುದು ದುರದೃಷ್ಟಕರ. ಇಂತಹ ಕೆಟ್ಟ ಹೇಳಿಕೆಗಳು ಕೆಸಿಆರ್ ಅವರಲ್ಲಿನ ಅತ್ಯಂತ ಹೊಲಸು ಆಲೋಚನೆಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ' ಎಂದಿದ್ದಾರೆ.
ಕೆಸಿಆರ್ ಬಳಸಿದ ಭಾಷೆಗೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮುಖಂಡ ಡಿ. ರಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಸಾರ್ವಜನಿಕ ಜೀವನದಲ್ಲಿ ಯಾರೂ ಇಂತಹ ಭಾಷೆ ಬಳಸಬಾರದು. ರಾಹುಲ್ ಗಾಂಧಿ ದೇಶದ ಅತ್ಯಂತ ಹಳೆಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ. ಇದಕ್ಕೂ ಮುನ್ನ ಬಿಜೆಪಿ ಅವರನ್ನು ಪಪ್ಪು ಎಂದು ಕರೆದಿತ್ತು. ಈಗ ಟಿಆರ್‌ಎಸ್ ಅವರನ್ನು ಬಫೂನ್ ಎಂದು ಕರೆದಿದೆ. ಇದು ಯಾವ ಬಗೆಯ ಭಾಷೆ?' ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications