1990ರ ಹತ್ಯಾಕಾಂಡ ಸಿಬಿಐ ತನಿಖೆಗೆ ಕೋರಿ ಸುಪ್ರೀಂಗೆ ಕಾಶ್ಮೀರಿ ಪಂಡಿತ ಅರ್ಜಿ
ನವದೆಹಲಿ, ಮಾರ್ಚ್ 25: 1990ರಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡ ಕುರಿತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯಿಂದ ತನಿಖೆ ನಡೆಸಬೇಕು ಎಂದು ಕೋರಿ ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಸುಪ್ರೀಂಕೋರ್ಟ್‌ಗೆ ಕ್ಯುರೇಟೀವ್ ಅರ್ಜಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ತಿರಸ್ಕೃತವಾದ ನಂತರವೂ ಪರಿಹಾರ ಕೋರಿ ಸಲ್ಲಿಸಬಹುದಾದ ಅಂತಿಮ ಮನವಿ ಇದಾಗಿದೆ. 1990ರ ಹಿಂಸಾಚಾರ, ಹತ್ಯಾಕಾಂಡ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2017ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ʼರೂಟ್ಸ್ ಇನ್ ಕಾಶ್ಮೀರ್ʼ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, "ಘಟನೆ ನಡೆದು 27ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಇದರಿಂದ ಅರ್ಜಿಯ ಉದ್ದೇಶ ಫಲಪ್ರದವಾಗದು. ಪುರಾವೆಗಳು ಲಭ್ಯ ಇರುವುದಿಲ್ಲ" ಎಂದು ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಈಗ ಕ್ಯುರೇಟೀವ್ ಅರ್ಜಿ ಸಲ್ಲಿಸಲಾಗಿದೆ.
1989- 90, 1997 ಮತ್ತು 1998 ರ ಅವಧಿಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ನಡೆಸಿದ್ದ ಯಾಸಿನ್ ಮಲಿಕ್ ಮತ್ತು ಫಾರೂಕ್ ಅಹ್ಮದ್ ದಾರ್ @ ಬಿಟ್ಟಾ ಕರಾಟೆ, ಜಾವೇದ್ ನಲ್ಕಾ ಮತ್ತಿತರ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು 26 ವರ್ಷ ಕಳೆದರೂ ಸೂಕ್ತ ತನಿಖೆ ನಡೆಸಿಲ್ಲ. ಈ ಅವಧಿಯಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಎಲ್ಲಾ ಅಪರಾಧಗಳ ಎಫ್‌ಐಆರ್/ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎ ಇಲ್ಲವೇ ಅಂತಹ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು.

ಪ್ರಕರಣದ ತನಿಖೆಯನ್ನು ಕಾಶ್ಮೀರದಿಂದ ದೆಹಲಿಗೆ ವರ್ಗಾವಣೆ ಮಾಡುವುದರಿಂದ ಸಾಕ್ಷಿಗಳ ರಕ್ಷಣೆ ಸಾಧ್ಯ ಹಾಗೂ ನ್ಯಾಯ ಹಾಗೂ ನಿಷ್ಪಕ್ಷಪಾತ ತನಿಖೆ ಸಾಧ್ಯ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಜೊತೆಗೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡಗಳ ತನಿಖೆಗಾಗಿ ಸ್ವತಂತ್ರ ಸಮಿತಿ ಅಥವಾ ಆಯೋಗದ ನೇಮಕ ಮಾಡಲು ಕೋರಲಾಗಿದೆ.
ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲು ಹಿರಿಯ ವಕೀಲರ ಪ್ರಮಾಣಪತ್ರ ಅಗತ್ಯ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧಕ್ಷ ವಿಕಾಸ್ ಸಿಂಗ್ ಪ್ರಮಾಣಪತ್ರ ನೀಡಿದ್ದು, ಇಂತಹ ಅರ್ಜಿಯನ್ನು ಗೌಪ್ಯವಾಗಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ.












Click it and Unblock the Notifications