TVK Vijay: ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಗೆ ನಟ ವಿಜಯ್ ಹಾಜರು
ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ತಮಿಳು ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಅವರು ಇಂದು ಸೋಮವಾರ (ಜನವರಿ 19) ನವದೆಹಲಿಯಲ್ಲಿ ಎರಡನೇ ಸುತ್ತಿನ ಸಿಬಿಐ ವಿಚಾರಣೆಗೆ ಹಾಜರಾದರು. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ಸಂಸ್ಥೆಯು (CBI) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಇಂದು ಬೆಳಗ್ಗೆ ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ನಟ ವಿಜಯ್ ಆಗಮಿಸಿದರು. ಕಾಲ್ತುಳಿತ, ಪಕ್ಷದ ಬೃಹತ್ ರ್ಯಾಲಿ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ವಿಚಾರಣೆಗೆ ಹಾಜರಾಗಿರುವ ವಿಜಯ್ ತನಿಖೆಗೆ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ. ಜನವರಿ 12ರಂದು ಸುಮಾರು ಆರು ಗಂಟೆಗಳ ಕಾಲ ಸಿಬಿಐ ವಿಚಾರಣೆ ಎದುರಿಸಿದ್ದ ವಿಜಯ್ ಅವರಿಗೆ ತನಿಖಾಧಿಕಾರಿಗಳು ಅಂದು ಸಾಕಷ್ಟು ಪ್ರಶ್ನೆಗಳಿಗೆ ಕೇಳಿದ್ದರು. ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಣೆ, ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ವಿಜಯ್ ಮಾತ್ರವಲ್ಲ ಹಲವರ ವಿಚಾರಣೆ
ಜನವರಿ 13ರಂದು ಬರಲು ತಿಳಿಸಿದಾಗ, ಅಂದು ಪೊಂಗಲ್ ಇರುವ ಕಾರಣ ಮತ್ತೊಂದು ದಿನಕ್ಕೆ ಡೇಟ್ ಫಿಕ್ಸ್ ಮಾಡಲಾಗಿತ್ತು. ಅದರಂತೆ ಜನವರಿ 19ರಂದು ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ವಿಜಯ್ ಅವರನ್ನು ಮಾತ್ರವಲ್ಲದೇ ಸಿಬಿಐ ಇಲ್ಲಿಯವರೆಗೆ ಹಲವಾರು ಟಿವಿಕೆ ಪದಾಧಿಕಾರಿಗಳು, ವಿಜಯ್ ಅವರ ಚಾಲಕ ಮತ್ತು ಕೆಲವು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಈಗಾಗಲೇ ಒಳಪಡಿಸಿದೆ.
ಇಂದು ನಡೆಯುತ್ತಿರುವ ಎರಡನೇ ಸುತ್ತಿನ ವಿಚಾರಣೆಯಲ್ಲಿ ಸಿಬಿಐ ಅಧಿಕಾರಿಗಳು ವಿಜಯ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇಂದು ಸಹ ಆರು ಗಂಟೆಗಳ ಕಾಲ ವಿಚಾರಣೆ ನಡೆಯುವ ನಿರೀಕ್ಷೆ ಇದೆ. ವಿಶೇಷ ತನಿಖಾ ತಂಡಕ್ಕೆ ನೀಡಿದ್ದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ಈವರೆಗೆ ನಟ ವಿಜಯ್ ಸೇರಿ ಹಲವರನ್ನು ವಿಚಾರಣೆ ನಡೆಸಲಾಗಿದೆ.
ಕಾಲ್ತುಳಿತ ಪ್ರಕರಣದ ಹಿನ್ನೆಲೆ
ಕಳೆದ ವರ್ಷ 2025 ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ಬೃಹತ್ ರ್ಯಾಲಿ ನಡೆಸಲಾಗಿತ್ತು. ಲಕ್ಷಾಂತರ ಜನರು ಸೇರಿದ್ದರು. ಈ ವೇಳೆ ನಟ ವಿಜಯ್ ಅವರು ಕಾರ್ಯಕ್ರಮಕ್ಕೆ ಬರುವುದು ತಡವಾಗಿತ್ತು. ಅವರು ಬಂದ ಕೆಲ ಹೊತ್ತಿನಲ್ಲೇ ನೆರೆದಿದ್ದ ಜನರು ನಟನನ್ನು ನೋಡಲು ಮುಗಿ ಬಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಟ್ಟು 41 ಪ್ರಾಣ ಬಿಟ್ಟರು. ಸುಮಾರು 60 ಕ್ಕೂ ಹೆಚ್ಚು ಜನರು ಗಾಯಗೊಂಡುರ. ಈ ಸಂಬಂಧ ಸಿಬಿಐ ಪುರಾವೆ ಸಂಗ್ರಹಿಸುತ್ತಿದೆ.
ವಿಜಯ್ ವಿರುದ್ಧ ಕೋರ್ಟ್ ಅಸಮಾಧಾನ
ಮದ್ರಾಸ್ ಹೈಕೋರ್ಟ್ ಸಹ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ಇಷ್ಟು ಜನರ ಸಾವಾಗಿದೆ. ನಿಮ್ಮಲ್ಲಿ ಪಶ್ಚಾತಾಪ ಭಾವನೆ ಕಾಣುತ್ತಿಲ್ಲ. ಜವಾಬ್ದಾರಿ ಅಥವಾ ವಿಷಾಧವನ್ನು ನೋವು ತೋರ್ಪಡಿಸಲಿಲ್ಲ. ಘಟನೆ ನಡೆಯುತ್ತಿದ್ದಂತೆ ನೀವು ಅಲ್ಲಿಂದ ಕಾಲ್ಕಿತ್ತಿದ್ದೀರಿ ಎಂದು ನ್ಯಾಯಪೀಠ ಅಸಮಾಧಾನ ಹೊರ ಹಾಕಿತ್ತು. ಈ ಪ್ರಕರಣದಲ್ಲಿ ತಮಿಳು ರಾಜ್ಯ ಸರ್ಕಾರದ ವಿರುದ್ಧ ನಟ ವಿಜಯ್ ಕಿಡಿ ಕಾರಿದ್ದರು. ನನ್ನನ್ನು ಬಂಧಿಸಿ, ಆದರೆ ಕಾರ್ಯಕರ್ತರು, ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದರು. ಈ ಘಟನೆಯು ಒಂದಷ್ಟು ರಾಜಕೀಯ ತಿರುವುಗಳನ್ನು ಪಡೆದಿತ್ತು.












Click it and Unblock the Notifications