ರಾಜ್ಯದ 9 ಜಿಲ್ಲೆಗಳಲ್ಲಿ ಜೂನ್ 2ರ ವರೆಗೂ ಅಧಿಕ ಮಳೆ, ಅಲರ್ಟ್ ಘೋಷಣೆ
ಬೆಂಗಳೂರು, ಮೇ. 29: ಮುಂಗಾರು ಪೂರ್ವ ಮಳೆಯಿಂದ ಉಂಟಾದ ತೀವ್ರ ಪ್ರವಾಹದ ಬಿಕ್ಕಟ್ಟಿನಲ್ಲಿ ಕರ್ನಾಟಕ ಇನ್ನೂ ತತ್ತರಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕೊಡಗು ಭೂಕುಸಿತದ ಭೀತಿಯನ್ನು ಎದುರಿಸುತ್ತಿದೆ. ಇದರ ನಡುವೆಯೇ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಜೂನ್ 2ರ ವರೆಗೂ ಅಧಿಕ ಮಳೆಯಾಗಲಿದೆ.
ಈ ಒಂಬತ್ತು ಜಿಲ್ಲೆಗಳಿಗೂ ಅಲರ್ಟ್ ಘೊಷಿಸಿದಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದಲ್ಲೊ ಜೂನ್‌ನಿಂದ ಮುಂಗಾರು ಮಳೆಯಾಗಲಿದ್ದು, ಕಳೆದ ವರ್ಷ ಮುಂಗಾರು ತಂದ ಅನಾಹುತವನ್ನು ನೀಡಿದ ಘಟನೆಗಳ ಬಗ್ಗೆ ಅಧಿಕಾರಿಗಳು ಇನ್ನು ಆತಂಕದಲ್ಲಿದ್ದಾರೆ. ಚಿಕ್ಕಮಗಳೂರಿನಲ್ಲಿ 47 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 77 ಗ್ರಾಮಗಳನ್ನು "ಅಪಾಯಕಾರಿ ವಲಯ" ಎಂದು ಗುರುತಿಸಲಾಗಿದೆ. ಕಳೆದ ವರ್ಷ ಭಾರೀ ನಷ್ಟ ಅನುಭವಿಸಿದ್ದರಿಂದ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಭೂಕುಸಿತ ಮತ್ತು ಪ್ರವಾಹದಿಂದಾಗಿ ಕೊಡಗು ಜಿಲ್ಲೆ ಐದು ವರ್ಷಗಳಿಂದ ರಾಜ್ಯದಲ್ಲಿ ಹೆಚ್ಚು ಹಾನಿಗೊಳಗಾಗಿದೆ. ಮಡಿಕೇರಿ ತಾಲ್ಲೂಕಿನಿಂದ 768 ಕುಟುಂಬಗಳ 2,681 ಜನರನ್ನು ಸ್ಥಳಾಂತರಿಸುವ ಕುರಿತು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ವರದಿ ಕಳುಹಿಸಿದೆ. ತುರ್ತು ಪರಿಸ್ಥಿತಿಗಳಿಗಾಗಿ 26 ಶಿಬಿರಗಳನ್ನು ಸ್ಥಾಪಿಸಲು ಆಡಳಿತವು ನಿರ್ಧರಿಸಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 1,143 ಕುಟುಂಬಗಳಿಂದ 4,162 ಜನರನ್ನು ಸ್ಥಳಾಂತರಿಸಬೇಕು ಮತ್ತು 30 ಶಿಬಿರಗಳನ್ನು ಸ್ಥಾಪಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಅದೇ ರೀತಿ ವಿರಾಜಪೇಟೆ ತಾಲೂಕಿನಲ್ಲಿ 582 ಕುಟುಂಬಗಳ 2,049 ಜನರನ್ನು ಸ್ಥಳಾಂತರಿಸಬೇಕಾಗಿದ್ದು, 26 ಶಿಬಿರಗಳನ್ನು ತೆರೆಯಬೇಕಿದೆ. ಈ ಪ್ರದೇಶವು ಕಳೆದ ವರ್ಷ ಭಾರೀ ಪ್ರವಾಹ, ಹಾನಿ ಎದುರಿಸಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಕೊಡಗು ಜಿಲ್ಲೆಗೆ ಆಗಮಿಸುತ್ತಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಧ್ಯ ಮತ್ತು ಉತ್ತರ ಕರ್ನಾಟಕವೂ ಮಳೆಯ ಅಬ್ಬರಕ್ಕೆ ತತ್ತರಿಸಿದೆ. ರೈತರಿಗೆ ಭಾರಿ ಹಾನಿಯಾಗಿದೆ. ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಗೆ (ಏಪ್ರಿಲ್‌ನಿಂದ ಜೂನ್‌ವರೆಗೆ) 52 ಸಾವುಗಳು ಸಂಭವಿಸಿದ್ದು, ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದು, ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ಟು 331 ಜಾನುವಾರುಗಳ ನಷ್ಟ ವರದಿಯಾಗಿದೆ, ಜೊತೆಗೆ 20,000 ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಮತ್ತು 814 ಮನೆಗಳಿಗೆ ಹಾನಿಯಾಗಿದೆ.
ಇನ್ನು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೇಲೂರು, ಹುಣಸೂರು, ಕಳಸ, ಶಿರಾಲಿಯಲ್ಲಿ ಮಳೆಯಾಗಿದೆ.












Click it and Unblock the Notifications