ಕರ್ನಾಟಕದಲ್ಲಿ ಬಿಜೆಪಿಯ ಗುಜರಾತ್ ಮಾಡೆಲ್ ಸೇರಿ ಇತರೆ ರಣತಂತ್ರ ಫಲಕೊಡಲಿಲ್ಲ ಏಕೆ?
ನವದೆಹಲಿ, ಮೇ. 15: ಆಡಳಿತ ವಿರೋಧಿ ಮತ್ತು ಪ್ರತಿಪಕ್ಷಗಳ ಗಟ್ಟಿಯಾದ ಪ್ರಚಾರದೊಂದಿಗೆ 2023 ರ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದಕ್ಕೆ ಅದರ ಹೊಸ ಹೊಸ ತಂತ್ರಗಳು, ಗುಜರಾತ್ ಮಾಡೆಲ್‌ಗಳು, ಹೊಸ ಪ್ರಯೋಗಗಳು ಕಾರಣ ಎನ್ನಲಾಗುತ್ತಿದೆ. ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯುವ.
ಚುನಾವಣೆಯ ಮೊದಲು, ಬಿಜೆಪಿ ಎರಡು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಒಂದು, ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತವನ್ನು ಹೊಂದಿರುವ ಪ್ರಬಲ ಲಿಂಗಾಯತ ರಾಜಕೀಯ ನಾಯಕರ ಮೇಲಿನ ಅವಲಂಬನೆಯಿಂದ ದೂರ ಸರಿಯುವುದು. ಎರಡನೆಯದು, ಜನಪ್ರಿಯವಲ್ಲದ ಶಾಸಕರು ಎಂದು ಭಾವಿಸಿ ಹಲವರಿಗೆ ಟಿಕೆಟ್ ನಿರಾಕರಿಸಿದ್ದು.

ಇದು, ಆ ಸಮಯದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಉಂಟಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಅಳವಡಿಸಿಕೊಂಡ ಯೋಜನೆಯಾಗಿತ್ತು. ಇದನ್ನೇ ಕರ್ನಾಟಕದಲ್ಲಿಯೂ ಮಾಡಲು ಬಿಜೆಪಿ ಹೊರಟಿತ್ತು. ಅಲ್ಲಿ 'ಹಿಂದುತ್ವ' ಜಾತಿ ಲೆಕ್ಕಾಚಾರಗಳು ಮತ್ತು ಶಾಸಕರ ವೈಯಕ್ತಿಕ ಪ್ರಭಾವವನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ, ಕರ್ನಾಟಕದ ಪರಿಸ್ಥಿತಿ ಬೇರೆಯದೇ ಇದೆ.
ಲಿಂಗಾಯತರನ್ನು ಕಾಂಗ್ರೆಸ್ ಕಡೆಗೆ ತಾನೇ ತಳ್ಳುವ ಮೂಲಕ ಮತ್ತು ಬಂಡಾಯಗಾರರು ಬಿಜೆಪಿಯ ಮತಗಳನ್ನು ತಮ್ಮ ಕಡೆ ಸೆಳೆಯುವ ಸ್ಥಿತಿಯನ್ನು ಬಿಜೆಪಿಯೇ ನಿರ್ಮಿಸಿತು ಎಂದು 2023 ರ ಚುನಾವಣೆಯ ಡೇಟಾ ತೋರಿಸುತ್ತದೆ.

ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರಗಳು ಬಿಜೆಪಿಯನ್ನು ಸೋಲಿಸಿವೆ
ಸಾಮಾನ್ಯವಾಗಿ, ಕಾಂಗ್ರೆಸ್‌ನ ಅಹಿಂದಾ ತಂತ್ರವು (ಅಲ್ಪಸಂಖ್ಯಾತರು, ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಕೇಂದ್ರೀಕರಿಸುವುದು) ಕೆಲಸ ಮಾಡಿದಂತಿದೆ. ಪಕ್ಷವು ಈ ಸಮುದಾಯಗಳ ಅಭ್ಯರ್ಥಿಗಳ ನಡುವೆ ಹೆಚ್ಚಿನ ಮತಗಳನ್ನು ಗಳಿಸಿದೆ. ಬ್ರಾಹ್ಮಣ ಅಭ್ಯರ್ಥಿಗಳಲ್ಲಿ ಮಾತ್ರ ಬಿಜೆಪಿ ಗಣನೀಯ ಮತಗಳನ್ನು ಹೊಂದಿದೆ.
2023 ಅಭ್ಯರ್ಥಿಗಳ ಜಾತಿವಾರು ಸಾಧನೆ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸ್ಥಾನಗಳಲ್ಲಿ ಕಾಂಗ್ರೆಸ್ ಪ್ರದರ್ಶನವು ಪ್ರಭಾವಶಾಲಿಯಾಗಿದೆ. ಅಲ್ಲಿ ಅದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿರುವ ಎಸ್‌ಸಿ-ಬಲ ಸಮುದಾಯದ ಅಭ್ಯರ್ಥಿಗಳ ಮೇಲೆ ಕೇಂದ್ರೀಕರಿಸಿದೆ. 2018ರ ಚುನಾವಣೆಗೆ ಹೋಲಿಸಿದರೆ 51 ಎಸ್‌ಸಿ/ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳನ್ನು ಗಳಿಸಿದರೆ, ಬಿಜೆಪಿ 10 ಮತ್ತು ಜೆಡಿಎಸ್ 4 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಎಸ್‌ಸಿ/ಎಸ್‌ಟಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತ ಹಂಚಿಕೆಯು ಈ ಕ್ಷೇತ್ರಗಳಲ್ಲಿ ಸುಮಾರು 9 ಶೇಕಡಾ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ.

ಲಿಂಗಾಯತರು ಕಾಂಗ್ರೆಸ್‌ನತ್ತ, ಒಕ್ಕಲಿಗರಿಂದ ಬಿಜೆಪಿಗೆ ಲಾಭ!
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕ್ಷೇತ್ರಗಳು ಜಾತಿಗಳ ಜೊತೆಗೆ ಮತದಾರರ ಆದ್ಯತೆಗೆ ಬೇರೆಯದೆ ಪ್ರಜ್ಞೆಯನ್ನು ನೀಡಬಹುದು. ಅಂದರೆ, ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಒಬಿಸಿ ಸಮುದಾಯದವರಾಗಿದ್ದರೆ, ಒಬಿಸಿ ಸಮುದಾಯವು ಕ್ಷೇತ್ರದಲ್ಲಿ ಗಣನೀಯ ಪ್ರಭಾವ ಹೊಂದಿದೆ ಎಂದು ಭಾವಿಸಬಹುದು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಜಾತಿಯ ಅಥವಾ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಸಂದರ್ಭದಲ್ಲಿ, ಒಂದೇ ಉಪಜಾತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ 102 ಕ್ಷೇತ್ರಗಳಲ್ಲಿ ಕಾಂಗ್ರೆಸ್ 32 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 19 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ನ ಯಶಸ್ಸಿನ ಕೀಲಿಯು ಅದರ ಲಿಂಗಾಯತ ಅಭ್ಯರ್ಥಿಗಳು ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾದ ಕ್ಷೇತ್ರಗಳ ಗೆಲುವನ್ನು ತೋರಿಸಿದೆ.
ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಮುಕ್ಕಾಲು ಪಾಲು ಲಿಂಗಾಯತ ನಾಯಕರು ಗೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬದಿಗೊತ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಲಿಂಗಾಯತ ಮತಗಳನ್ನು ಕಡೆಗಣಿಸಿದೆ ಎಂದು ಚುನಾವಣಾ ಪ್ರಚಾರದ ಮೂಲಕ ಕಾಂಗ್ರೆಸ್ ತನ್ನ ಪ್ರಚಾರವನ್ನು ಹೆಚ್ಚಿಸಿತು. ಶೆಟ್ಟರ್ ಹೆಚ್ಚಿನ ಅಂತರದಿಂದ ಸೋತರೂ, ಕಾಂಗ್ರೆಸ್‌ನ ಈ ಲಿಂಗಾಯತ ವಿರೋಧಿ ಬಿಜೆಪಿ ಎಂಬ ಪ್ರಚಾರ ಕಾಂಗ್ಎರಸ್ ಕಡೆಗೆ ಮತಗಳನ್ನು ಸೆಳೆದಿದೆ.
ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್‌ನ ಲಿಂಗಾಯತ ಅಭ್ಯರ್ಥಿಗಳು ಕಣಕ್ಕಿಳಿದ 38 ಕ್ಷೇತ್ರಗಳಲ್ಲಿ ಇದರ ನಿರ್ಧಾರ ಸ್ಪಷ್ಟವಾಗಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಮುಖ ಹಿನ್ನಡೆ ಅನುಭವಿಸಿದೆ. 2018 ರಲ್ಲಿ 21 ಕ್ಕೆ ಹೋಲಿಸಿದರೆ 2023 ರಲ್ಲಿ ಕೇವಲ ಎಂಟು ಗೆದ್ದಿದೆ. 2018 ರಲ್ಲಿ ಕೇವಲ 14 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2023 ರಲ್ಲಿ 29 ಗೆದ್ದಿದೆ. 2023 ರಲ್ಲಿ ಜೆಡಿಎಸ್ ಕೇವಲ ಒಂದು ಸ್ಥಾನ ಗೆದ್ದಿದೆ.
ಈ ಲಾಭ ಮತ ಹಂಚಿಕೆಯಲ್ಲೂ ಕಂಡುಬರುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಲಿಂಗಾಯತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಕ್ಷೇತ್ರಗಳನ್ನು ನೋಡುವುದಾದರೇ, ಇವುಗಳಲ್ಲಿ 38 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ನ ಮತ ಹಂಚಿಕೆಯು ಶೇಕಡಾ 7 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ, ಇದು 2023 ರ ಚುನಾವಣೆಗಳಲ್ಲಿ ಅದರ ಒಟ್ಟಾರೆ ಮತಗಳ ಹಂಚಿಕೆಗಿಂತ ಹೆಚ್ಚಾಗಿದೆ.
ಇನ್ನು ದಕ್ಷಿಣ ಕರ್ನಾಟಕದ ಒಕ್ಕಲಿಗರು ಬಿಜೆಪಿಗೆ ಮತ ಹಾಕಿದ್ದಾರೆ. ಇಲ್ಲಿ ಬಿಜೆಪಿ ಹೆಚ್ಚುವರಿ ಕ್ಷೇತ್ರವನ್ನು ಗೆದ್ದಿದೆ ಮತ್ತು ಮತ ಹಂಚಿಕೆಯಲ್ಲಿ ಶೇಕಡಾ 9.5 ಅಂಕಗಳ ಹೆಚ್ಚಳವನ್ನು ಕಂಡಿದೆ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ (ಎಲ್ಲಾ ಮೂರೂ ಪಕ್ಷಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು) ಇದೇ ಪ್ರಮಾಣದ ಮತ ಹಂಚಿಕೆಯನ್ನು ಕಳೆದುಕೊಂಡಿರುವ ಜೆಡಿಎಸ್‌ಗೆ ಇದು ತುಂಬಲಾರದ ನಷ್ಟವಾಗಿದೆ. ಈ ಸ್ಥಾನಗಳಲ್ಲಿ ಜೆಡಿಎಸ್ ಮತ ಹಂಚಿಕೆಯ ನಷ್ಟವು ಹೆಚ್ಚಾಗಿ ಒಕ್ಕಲಿಗ ನೇತೃತ್ವದ ಪಕ್ಷಕ್ಕೆ ಅಸಮಾಧಾನವನ್ನುಂಟುಮಾಡುತ್ತದೆ.
ಬಂಡಾಯವೆದ್ದವರು ಮತ್ತು ಪಕ್ಷಾಂತರಿಗಳು
ಹಾಲಿ ಶಾಸಕರಿಗೆ ಪಕ್ಷದ ಟಿಕೆಟ್ ನಿರಾಕರಿಸುವ ಮೂಲಕ ಮತ್ತು ತಮ್ಮ ಮತದಾರರ ಮುಂದೆ ಯಾವುದೆ ಹಗರಣವಿಲ್ಲದೆ ನಿಲ್ಲಬಲ್ಲ ಹೊಸ ಮುಖಗಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅಧಿಕಾರ ವಿರೋಧಿ ಬೆಳವಣಿಗೆಯನ್ನು ಕಂಡಿತು. ಈ ತಂತ್ರವು ಇತ್ತೀಚೆಗೆ ಗುಜರಾತ್ ಚುನಾವಣೆಯಲ್ಲಿ ಅದ್ಭುತವಾಗಿ ಕೆಲಸ ಮಾಡಿ ಭಾರೀ ಯಶಸ್ಸು ಕೂಡ ಪಡೆದಿತ್ತು. ಈ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಿ ಬಹುಮತವನ್ನು ತಲುಪಿತು.
ಹೀಗಾಗಿಯೇ ಬಿಜೆಪಿಯು 21 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಇದರಲ್ಲಿ ಹಲವರು ಕಾಂಗ್ರೆಸ್ ಬಾಗಿಲು ತಟ್ಟಿದ್ದರು. ರಾಜ್ಯಗಳ 224 ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಕಡಿಮೆ ಅಂದರೆ ಕೇವಲ 103 ಸ್ಥಾನಗಳಲ್ಲಿ 2018 ರ ಬಿಜೆಪಿಯ ಅಭ್ಯರ್ಥಿಗಳಿಗೆ 2023 ರಲ್ಲಿ ಟಿಕೆಟ್ ನೀಡಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಹೆಚ್ಚಾಗಿ ಉಸ್ತುವಾರಿಗಳು ಮತ್ತು 2018 ರಲ್ಲಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತವರಿಗೆ ಟಿಕೆಟ್ ನೀಡಿ ತನ್ನ ಜಾಣ್ಮೆ ಮೆರೆಯಿತು.
ಬಿಜೆಪಿ ಟಿಕೆಟ್ ನಿರಾಕರಿಸಿದ ಶಾಸಕರು ಕಾಂಗ್ರೆಸ್‌ಗೆ ಹೋದರು, ಕೆಲವರು ಸ್ವತಂತ್ರವಾಗಿ ನಿಂತರು, ಇದು ಬಿಜೆಪಿಗೆ ಕ್ಷೇತ್ರಗಳು ಮತ್ತು ಮತ ಹಂಚಿಕೆ ಕಡಿಮೆಯಾಗಲು ಕಾರಣವಾಯಿತು. ವಿಪರ್ಯಾಸವೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಪಕ್ಷಾಂತರಗೊಂಡ 19 ಪಕ್ಷಾಂತರ ರಾಜಕಾರಣಿಗಳು ಉತ್ತಮ ಪ್ರದರ್ಶನ ನೀಡಿದರು - ಬಿಜೆಪಿಯು ವೈಯಕ್ತಿಕ ಅಭ್ಯರ್ಥಿಗಳ ಜನಪ್ರಿಯತೆಯ ಕಾರಣದಿಂದಾಗಿ ಆರು ಸ್ಥಾನಗಳನ್ನು ಗಳಿಸಿತು.
ಫಲಿಸದ ಬಿಜೆಪಿ ಕಾರ್ಯತಂತ್ರ: ಕೆಲವೆಡೆ ಬಿಜೆಪಿಯಿಂದ ಟಿಕೆಟ್ ಸಿಗದ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಪಡೆದ ಮತಗಳು ಮತ್ತು ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆ ಇದೆ. ಹೀಗೆ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಪರೋಕ್ಷವಾಗಿ ಇತರ ಅಭ್ಯರ್ಥಿಗಳಳ ಗೆಲುವಿಗೆ ಪಾಲು ನೀಡಿದ್ದಾರೆ. ಗಣಿ ಉದ್ಯಮಿ ಮತ್ತು ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು 2023 ರ ಚುನಾವಣೆಗೆ ಮೊದಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಘೋಷನೆ ಮಾಡಿದ್ದರು. ಅವರ ಪಕ್ಷವು ಕೇವಲ ಒಂದು ಕ್ಷೇತ್ರವನ್ನು ಗೆದ್ದಿದೆ. ಆದರೆ, ಇತರ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಸೋಲಿಗೆ ಈ ಜನಾರ್ದನ ರೆಡ್ಡಿ ಕಾರಣವಾಗಿದ್ದಾರೆ.
(ಮಾಹಿತಿ ಕೃಪೆ: ಎನ್‌ಡಿಟಿವಿ)












Click it and Unblock the Notifications