'ಕರ್ನಾಟಕ, ನೀನೂ ಕೂಡ..!'; ಸೀಜರ್ ಡೈಲಾಗ್ ಹೇಳಿದ ಅಬ್ದುಲ್ಲಾ
ನವದೆಹಲಿ, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ವಿರೋಧಿಗಳಲ್ಲಿ ಕಳವಳ ಮೂಡಿಸಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದರಿಂದ, ಕಾಂಗ್ರೆಸ್ ಪ್ರಾಬಲ್ಯವಿದ್ದ ರಾಜ್ಯವಾದ ಕರ್ನಾಟಕದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಇತರೆ ಪಕ್ಷಗಳು ಈ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು.
ಕಾಂಗ್ರೆಸ್ ಮತ್ತೆ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರಗಳು ಹುಸಿಯಾಗಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಹಾಗೂ ಬಿಜೆಪಿಯ ಯಶಸ್ಸನ್ನು ಕಂಡು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಾಟಕಕಾರ ವಿಲಿಯಂ ಶೇಕ್‌ಸ್ಪಿಯರ್‌ನ ಪ್ರಸಿದ್ಧ ನಾಟಕದ ಸಂಭಾಷಣೆಯನ್ನು ಉಸುರಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡರಾಗಿರುವ ಒಮರ್ ಅಬ್ದುಲ್ಲಾ ಅವರು ಮೂರೇ ಪದಗಳಲ್ಲಿ ತಮ್ಮ ಹತಾಷೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶೇಕ್‌ಸ್ಪಿಯರ್‌ನ ದುರಂತ ನಾಟಕ 'ಜೂಲಿಯಸ್ ಸೀಜರ್'ನಲ್ಲಿ ಸೀಜರ್ ತನ್ನ ಆತ್ಮೀಯ ಗೆಳೆಯ ಬ್ರೂಟಸ್‌ಗೆ 'ಎಟ್ ಟು ಬ್ರೂಟ್' (ಬ್ರೂಟಸ್, ನೀನೂ ಕೂಡ) ಎಂದು ನೋವು-ಅಚ್ಚರಿಯಿಂದ ಹೇಳುವ ಮಾತನ್ನು ಕರ್ನಾಟಕಕ್ಕೆ ಅನ್ವಯಿಸಿದ್ದಾರೆ.
'ಎಟ್ ಟು ಕರ್ನಾಟಕ' (ಕರ್ನಾಟಕ; ನೀನೂ ಕೂಡ) ಎಂದು ಒಮರ್ ಅಬ್ದುಲ್ಲಾ, ಕರ್ನಾಟಕದಲ್ಲಿನ ಕಾಂಗ್ರೆಸ್ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications