BV Srinivas: ಮಹಿಳೆಗೆ ಕಿರುಕುಳ ಆರೋಪ; ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್‌ಗೆ ಬಂಧನ ಭೀತಿ
ಅಸ್ಸಾಂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಸೆಷನ್ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅಸ್ಸಾಂನಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಭದ್ರಾವತಿ ವೆಂಕಟ ಶ್ರೀನಿವಾಸ್ ಅಲಿಯಾಸ್ ಬಿ.ವಿ. ಶ್ರೀನಿವಾಸ್ ಅವರಿಗೆ ಇದೀಗ ಬಂಧನದ ಭೀತಿ ಎದುರಾಗಿದೆ.

ಮಹಿಳೆ ಮೇಲಿನ ಕಿರುಕುಳ ಆರೋಪದ ಸಂಬಂಧ ಕೆಲ ದಿನಗಳ ಹಿಂದಷ್ಟೇ, ಏಪ್ರಿಲ್ 23ರಂದು ಅಸ್ಸಾಂ ಪೊಲೀಸರು ಬೆಂಗಳೂರಿಗೆ ಬಂದಿದ್ದರು ಮತ್ತು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ಅಂಕಲ್ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದರು.
ಅನಂತರ ಬಿ.ವಿ. ಶ್ರೀನಿವಾಸ್ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ 72ನೇ ಸಿಸಿಎಚ್ ಕೋರ್ಟ್ ಅರ್ಜಿಯನ್ನು ವಿಚಾರಣೆ ನಡೆಸಿ, ಬಿ.ವಿ. ಶ್ರೀನಿವಾಸ್ ಅವರ ಮನವಿಯನ್ನು ತಿರಸ್ಕರಿಸಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅಸ್ಸಾಂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅವರು ಬಿ.ವಿ. ಶ್ರೀನಿವಾಸ್ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಸಿದ್ದರು. ಬಳಿಕ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಗೌಹಾಟಿ ಹೈಕೋರ್ಟ್ ನಿರಾಕರಿಸಿದ ನಂತರ ಕರ್ನಾಟಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಹೈಕಮಾಂಡ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ
ಬಿ.ವಿ. ಶ್ರೀನಿವಾಸ್ ನೀಡುತ್ತಿರುವ ಕಿರುಕುಳದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಕಿತಾ ದತ್ತಾ ಅಸಮಾಧಾನ ಹೊರಹಾಕಿದ್ದರು.

ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದ ಅಂಕಿತಾ ದತ್ತಾ, ಹೆಣ್ಣು ಎಂಬ ಕಾರಣಕ್ಕೆ ಸತತವಾಗಿ ನನಗೆ ಕಿರುಕುಳ ಕೊಡಲಾಗಿತ್ತು. ಲಿಂಗ ತಾರತಮ್ಯ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ನೀವು ಮದ್ಯ ಸೇವನೆ ಮಾಡ್ತೀರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಬಿ.ವಿ. ಶ್ರೀನಿವಾಸ್ ವಿರುದ್ಧ ಅಂಕಿತಾ ದತ್ತಾ ಆರೋಪಿಸಿದ್ದರು.
ಕಿರುಕುಳ ಆರೋಪ ಮಾಡಿದ್ದಕ್ಕೆ ಕಾಂಗ್ರೆಸ್‌ನಿಂದ ವಜಾ
ಯುವ ಕಾಂಗ್ರೆಸ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಬಿವಿ ಅವರ ವಿರುದ್ಧ ಮಾನಸಿಕ ಕಿರುಕುಳ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಆರೋಪ ಮಾಡಿದ ಬಳಿಕ ಅಸ್ಸಾಂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅವರನ್ನು 'ಪಕ್ಷ ವಿರೋಧಿ ಚಟುವಟಿಕೆ'ಗಾಗಿ ಆರು ವರ್ಷಗಳ ಕಾಲ ಕಾಂಗ್ರೆಸ್‌ನಿಂದ ವಜಾಗೊಳಿಸಲಾಗಿದೆ.
ಯಾವುದೇ ಮುನ್ನೆಚ್ಚರಿಕೆ ನೀಡದೆ ಅಸ್ಸಾಂ ಯೂತ್ ಕಾಂಗ್ರೆಸ್ ಮುಖ್ಯಸ್ಥೆ ಸ್ಥಾನದಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ಅಂಕಿತಾ ದತ್ತಾ ಹೇಳಿದ್ದರು. ಬಿ.ವಿ. ಶ್ರೀನಿವಾಸ್ ಅವರು ತಮಗೆ 'ಸೆಕ್ಸಿಸ್ಟ್ ಮತ್ತು ಕೋಮುವಾದಿ' ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಅಂಕಿತಾ ದತ್ತಾ ಅವರು ಅಸ್ಸಾಂನಲ್ಲಿ ತರುಣ್ ಗೊಗೊಯ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದ ಅಂಜನ್ ದತ್ತಾ ಅವರ ಪುತ್ರಿಯಾಗಿದ್ದಾರೆ.












Click it and Unblock the Notifications