ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಲೋಕಸಭೆ ಚುನಾವಣೆಗೆ?
ಪಾಟ್ನಾ, ಸೆಪ್ಟೆಂಬರ್ 04: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ತಮ್ಮ ಎಡಪಂಥೀಯ ನಿಲುವುಗಳಿಂದ, ಮೋದಿ ವಿರೋಧಿ ಹೇಳಿಕೆಗಳಿಂದ ಭಾರಿ ಖ್ಯಾತಿ ಗಳಿಸಿರುವ ಕನ್ಹಯ್ಯಾ ಕುಮಾರ್ ಅವರು ತಮ್ಮ ಸ್ವಂತ ಜಿಲ್ಲೆಯಾದ ಬಿಗುಸರಾಯ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಕನ್ಹಯ್ಯಾ ಅವರು ಮಹಾಮೈತ್ರಿಯ ಅಭ್ಯರ್ಥಿ ಆಗಿದ್ದಾರೆ. ಅವರಿಗೆ ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಅವರು ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಇದಕ್ಕೆ ಪೂರಕವಾಗಿ ಇತ್ತೀಚೆಗಷ್ಟೆ ಅವರು ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಆಗಿದ್ದರು.

ದೇಶದ್ರೋಹದ ಆರೋಪ ಹೊರಿಸಿಕೊಂಡು ಜೈಲು ಸೇರಿ ಆ ನಂತರ ಅದರಿಂದ ಮುಕ್ತರಾದ ಕನ್ಹಯ್ಯಾ ಅವರು ತಮ್ಮ ಪ್ರಖರ ಮತ್ತು ವ್ಯಂಗ್ಯ ತುಂಬಿದ ಭಾಷಣಗಳಿಂದ ಖ್ಯಾತರು.
ಕನ್ಹಯ್ಯಾ ಕುಮಾರ್ ಸಿಪಿಐನ ಸಕ್ರಿಯ ಸದಸ್ಯರು ಹಾಗಾಗಿ ಅವರು ಅದೇ ಪಕ್ಷದ ಗುರುತಿನಿಂದಲೇ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ. ಆದರೆ ಅವರಿಗೆ ವಿರೋಧ ಪಕ್ಷಗಳ ಮಹಾಮೈತ್ರಿಕೂಟ ಬೆಂಬಲ ನೀಡುತ್ತಿದೆ. ಸಿಪಿಐ ಸಹ ಕನ್ಹಯ್ಯಾ ಕುಮಾರ್ ಚುನಾವಣೆಗೆ ನಿಲ್ಲಲು ಒತ್ತಾಯ ಮಾಡುತ್ತಿದೆ.
ಇತ್ತೀಚೆಗೆ ಬಿಗುಸರಾಯ್ ನಲ್ಲಿಯೇ ಬೀಡು ಬಿಟ್ಟಿರುವ ಕನ್ಹಯ್ಯಾ ಕುಮಾರ್, 'ನಾನು ದೇಶದೆಲ್ಲೆಡೆ ಸಕ್ರಿಯನಾಗಿದ್ದೇನೆ ಆದರೆ ಇದು ನನ್ನ ಊರು ಹಾಗಾಗಿ ಇಲ್ಲಿಗೆ ಹೆಚ್ಚಿನ ಮಹತ್ವ ನೀಡಿದ್ದೇನೆ ಅಷ್ಟೆ' ಎಂದಿದ್ದಾರೆ ಆದರೆ ರಾಜಕೀಯ ವಿಷಯವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.












Click it and Unblock the Notifications