Bharat Jodo Yatra: ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಸೂಪರ್‌ಸ್ಟಾರ್ ಕಮಲ್ ಹಾಸನ್
ನವದೆಹಲಿ, ಡಿಸೆಂಬರ್ 24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸೂಪರ್ ಸ್ಟಾರ್ ಹಾಗೂ ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಅವರು ಪಾಲ್ಗೊಂಡರು.
ಇಂದು ದೆಹಲಿ ತಲುಪಿರುವ ಯಾತ್ರೆಯು ಅಪಾರ ಜನಬೆಂಬಲವನ್ನು ಪಡೆದಿದೆ. ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುವ ಯಾತ್ರೆಯು ಸೆಪ್ಟೆಂಬರ್ 7 ರಂದು ಆರಂಭವಾಗಿದೆ.

ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಹಾಗೂ ಹರಿಯಾಣದ ಮೂಲಕ ಯಾತ್ರೆ ಸಾಗಿ ಹೋಗಿದೆ. ಇಂದು ದೆಹಲಿಯ ಕೆಂಪು ಕೋಟೆಗೆ ತಲುಪಲಿದೆ.
Superstar Kamal Haasan joins Rahul Gandhi in Bharat Jodo Yatra ⚡⚡💕 pic.twitter.com/UTang9y5IO
— Srinivas BV (@srinivasiyc) December 24, 2022
ಅಪಾರ ಜನಸಂಖ್ಯೆಯೊಂದಿಗೆ ಮುನ್ನೆಡೆಯುತ್ತಿರುವ ಯಾತ್ರೆಯಲ್ಲಿ ಇಂದು ಸಂಜೆ (ಶನಿವಾರ) ಬಹುಭಾಷಾ ನಟ, ಸೂಪರ್‌ಸ್ಟಾರ್ ಕಮಲ್ ಹಾಸನ್ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ನಗುತ್ತಲೇ ಜನರೊಂದಿಗೆ ಕೈ ಬೀಸಿದ್ದಾರೆ. ದೆಹಲಿ ಕೆಂಪು ಕೋಟೆಯ ವರೆಗೂ ಕಮಲ್ ಹಾಸನ್ ನಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್
ಭಾರತಕ್ಕೆ ಕೋವಿಡ್ ಮರಳಿ ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಪತ್ರ ಬರೆದಿದ್ದಾರೆ. ಯಾತ್ರೆಯನ್ನು ನಿಲ್ಲಿಸಲು ಹೇಳಿದ್ದಾರೆ. ಭಾರತದಲ್ಲಿ ಬಿಜೆಪಿ ಅವರು ಲೆಕ್ಕವಿಲ್ಲದಷ್ಟು ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ. ಆದರೆ, ಭಾರತ್ ಜೋಡೋ ಯಾತ್ರೆ ನಡೆಯುವಲ್ಲಿ ಮಾತ್ರ ಕೊರೊನಾ ಸೋಂಕು ಇದೆ ಅವರು ಹೇಳಿತ್ತಿದ್ದಾರೆಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ. ಭಯವನ್ನೇ ದ್ವೇಷವನ್ನಾಗಿ ಅವರು ಪರಿವರ್ತಿಸುತ್ತಿದ್ದಾರೆ. ನಾವು ಪ್ರೀತಿ ಹಂಚುತ್ತೇವೆ. ದ್ವೇಷದ ಬಜಾರಿನಲ್ಲಿ ಪ್ರೀತಿಯನ್ನಷ್ಟೇ ನಾನು ಮಾರಲು ಬಯಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ ಜೈರಾಮ್ ರಮೇಶ್
ದೆಹಲಿಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಅಪಾರ ಜನಮನ್ನಣೆ ದೊರೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಇದೇ ವೇಳೆ, ಯಾತ್ರೆಯಲ್ಲಿ ಬಿಜೆಪಿ ನಾಯಕರೂ ಪಾಲ್ಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಭಾರತವನ್ನು ಜೋಡಿಸಲು ಬಯಸುವ ಜನರೆಲ್ಲರೂ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದಾರೆ. ದೆಹಲಿ ರಾಜ್‌ಘಾಟ್‌ಗೆ ಇಂದು ಸಂಜೆ ರಾಹುಲ್ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications