ಹುಲಿರಾಯ ಅಂದ್ರೆ ಕ್ರೌರ್ಯತೆಗೂ ಮೀರಿದ ಆಕರ್ಷಣೆ!

Posted By:
Subscribe to Oneindia Kannada

ಆ ಮುಖದಲ್ಲಿ ಕ್ರೌರ್ಯತೆಗಿಂತಲೂ ಹೆಚ್ಚಾಗಿ ಒಂದು ರೀತಿಯ ಗಾಂಭೀರ್ಯ. ಸೂಜಿಯ ಮೊನಚನ್ನೂ ಮೀರಿಸುವ ತೀಕ್ಷ್ಣ ನೋಟ, ಲಲನೆಯರನ್ನೂ ನಾಚಿಸುವ ಗಜಗಾಂಭೀರ್ಯ ನಡಿಗೆ, ದೇಹದ ತುಂಬೆಲ್ಲ ರಂಗೋಲಿಗೂ ಸ್ಪರ್ಧೆ ಒಡ್ಡುವಂಥ ಪಟ್ಟೆ ಪಟ್ಟೆ ಚಿತ್ರ.

ಕಣ್ಣಿಗೆ ಬಿದ್ದ ಶಿಕಾರಿಯನ್ನು ಪಟ್ಟುಹಿಡಿದು ಬೆನ್ನತ್ತಿ, ತಿಂದು ತೇಗಿಯೇ ಬರುವ ಖರಾರುವಾಕ್ ಗುರಿ, ಬೇಟೆ ಸಿಕ್ಕು, ಹೊಟ್ಟೆ ತುಂಬಿದ ಮೇಲೆ ಕ್ರೌರ್ಯತೆಗೂ, ತನಗೂ ಸಂಬಂಧವೇ ಇಲ್ಲ ಎಂಬಂತೆ ಆಕಳಿಸಿ ಮಲಗುವ ನಿರುಪದ್ರವಿ ಜೀವಿ! ಹೌದು, ಇದು ಭಾರತದ ರಾಷ್ಟ್ರಪ್ರಾಣಿ ಹುಲಿಯ ಕತೆ!

ಜಂಗಲ್ ಡೈರಿ: ಪ್ರಾಣಿ ಜಗತ್ತಿನ ಉಳಿವು-ಅಳಿವಿನ ನಿತ್ಯ ಹೋರಾಟ

ಕಳೆದ ವರ್ಷ(2016) ಆಗಸ್ಟ್ 18 ರಂದು ರಾಜಸ್ಥಾನದ ರಣತಂಬೂರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಮಚ್ಲಿ ಎಂಬ ಹೆಣ್ಣುಹುಲಿ ಮೃತವಾದಾಗ ಇಡೀ ದೇಶವೂ ಕಣ್ಣೀರಿಟ್ಟಿತ್ತು. ನಂತರ ಈ ವರ್ಷದ ಆರಂಭದಲ್ಲಿ ಬಂಡೀಪುರದ ಪ್ರಿನ್ಸ್ ಹುಲಿ ಸತ್ತಾಗಲೂ ಇಂಥದೇ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ವನ್ಯಜೀವಿ ಛಾಯಾಗ್ರಾಹಕರ ಪಾಲಿಗೆ 'ಮಾಡೆಲ್' ಆಗಿದ್ದ ಮಚ್ಲಿ ಮತ್ತು ಪ್ರಿನ್ಸ್ ಸಾವು ಸೂತಕದ ವಾತಾವರಣ ಸೃಷ್ಟಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ರಾಷ್ಟ್ರಪ್ರಾಣಿ ಎಂದು ಹುಲಿಯನ್ನು ಒಪ್ಪಿಕೊಂಡ ಭಾರತೀಯರು, ಕ್ರೌರ್ಯತೆಗೂ ಮೀರಿದ ಆಕರ್ಷಣೆಯೊಂದು ಹುಲಿರಾಯನಲ್ಲಿದೆ ಎಂಬ ಸತ್ಯವನ್ನೂ ಅಪ್ಪಿಕೊಂಡಿದ್ದೇವೆ!

ಜಂಗಲ್ ಡೈರಿ: ಜಿಮ್ ಕಾರ್ಬೆಟ್ ಆ ನರಭಕ್ಷಕ ಪ್ರಾಣಿಗಳ ಕೊಲ್ಲದೆ ಇದ್ದಿದ್ದರೆ...

ಹುಲಿ ಇಂದು ನೆನಪಾಗುವುದಕ್ಕೂ ಕಾರಣವಿದೆ. ಇಂದು(ಜುಲೈ 29) ಅಂತಾರಾಷ್ಟ್ರೀಯ ಹುಲಿ ದಿನ. ವನ್ಯಜೀವಿ ಪ್ರಪಂಚದಲ್ಲಿ ಹುಲಿಗೆ ಅದರದೇ ಆದ ಸ್ಥಾನವಿದೆ. ಅದರಲ್ಲೂ ರಾಷ್ಟ್ರಪ್ರಾಣಿ ಎಂಬ ಕಾರಣಕ್ಕೆ ಭಾರತೀಯರು ಹುಲಿಗೆ ಎಲ್ಲಿಲ್ಲದ ಮಹತ್ವದ ಸ್ಥಾನ ನೀಡಿದ್ದೇವೆ.

ಕರ್ನಾಟಕಕ್ಕೆ ಅಗ್ರಸ್ಥಾನ

ಕರ್ನಾಟಕಕ್ಕೆ ಅಗ್ರಸ್ಥಾನ

ಭಾರತದಲ್ಲಿ ಹುಲಿ ಸಂತತಿ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂಬುದು ಕರ್ನಾಟಕದ ಜನರಿಗೆ ಹೊಸದೊಂದು ಕೋಡೂ ಹೌದು! 2014ರಲ್ಲಿ ನಡೆದ ಹುಲಿಗಣತಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 406 ಹುಲಿಗಳಿವೆ. 2010 ರಲ್ಲಿ ನಡೆದ ಹುಲಿಗಣತಿ ಪ್ರಕಾರ ಕರ್ನಾಟಕದಲ್ಲಿದ್ದ ಹುಲಿಗಳ ಸಂಖ್ಯೆ 300.

ವಿಶ್ವದಲ್ಲಿ ಭಾರತಕ್ಕೇ ಅಗ್ರಸ್ಥಾನ!

ವಿಶ್ವದಲ್ಲಿ ಭಾರತಕ್ಕೇ ಅಗ್ರಸ್ಥಾನ!

ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ. 2010 ರ ಹುಲಿಗಣತಿಯ ಪ್ರಕಾರ ಭಾರತದಲ್ಲಿದ್ದ ಹುಲಿಗಳ ಸಂಖ್ಯೆ1,706. ಆದರೆ 2014 ರ ಹುಲಿಗಣತಿಯ ಪ್ರಕಾರ ಈ ಸಂಖ್ಯೆ 2,226 ಕ್ಕೇರಿದ್ದು ಹುಲಿ ಸಂತತಿ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವೆನ್ನಿಸಿದೆ. ಭಾರತದ ಪಶ್ಚಿಮ ಘಟದ ದಟ್ಟ ಕಾಡಿನಲ್ಲಿ 776 (2014 ರ ಹುಲಿಗಣತಿ ಪ್ರಕಾರ) ಹುಲಿಗಳಿವೆಯಂತೆ! ಪಶ್ಚಿಮ ಘಟ್ಟ ಹಾದು ಹೋಗುವ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಅದೇ ಕಾರಣಕ್ಕಾಗಿಯೇ ಹುಲಿ ಸಂಖ್ಯೆ ಹೆಚ್ಚು.

ಹುಲಿ ಸಂಖ್ಯೆಯಲ್ಲಿ ಏರಿಕೆ ಹೆಮ್ಮೆಯ ವಿಚಾರ

ಹುಲಿ ಸಂಖ್ಯೆಯಲ್ಲಿ ಏರಿಕೆ ಹೆಮ್ಮೆಯ ವಿಚಾರ

ಸರ್ಕಾರಗಳು ರಾಷ್ಟ್ರಪ್ರಾಣಿಯ ಉಳಿವಿಗಾಗಿ ತಂದ ಯೋಜನೆಗಳು, ಜೊತೆಗೆ ಕರ್ನಾಟಕದ ಬಂಡೀಪುರ, ಭದ್ರಾ, ನಾಗರಹೊಳೆ, ಆನ್ಶಿ, ಬಿಆರ್ ಟಿ, ಸೇರಿದಂತೆ ಭಾರತದ 50 ಅಭಯಾರಣ್ಯಗಳನ್ನು ಹುಲಿ ಮೀಸಲು ಎಂದು ಘೋಷಿಸಿರುವುದು, ಬೇಟೆ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ, ವನ್ಯಜೀವಿ ರಕ್ಷಿಸಲು ಅರಣ್ಯ ಇಲಾಖೆಗಳಿಗೂ ಕಟ್ಟಪ್ಪಣೆ ಈ ಎಲ್ಲವೂ ಸೇರಿ ಹುಲಿ ಸಂತತಿ ಹೆಚ್ಚುತ್ತಿದೆ.

ದೈತ್ಯ ಬೆಕ್ಕು!

ದೈತ್ಯ ಬೆಕ್ಕು!

ಪ್ಯಾಂಥೆರಾ ಟೈಗ್ರಿಸ್ ಎಂಬ ವೈಜ್ಞಾನಿಕ ಹೆಸರು ಪಡೆದ ಹುಲಿ ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಎಂಬ ಕುಟುಂಬಕ್ಕೆ ಸೇರಿದ ಜೀವಿ. 13 ಅಡಿ ಉದ್ದ 300 ಕೆಜಿವರೆಗೂ ತೂಗಬಹುದಾದ ಈ ಹುಲಿಗಳ ಪೈಕಿ ಭಾರತದ ಬಂಗಾಳಿ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಆಹಾರ ಸರಪಳಿಯನ್ನು ಭದ್ರವಾಗಿಡುವಲ್ಲಿ ಪ್ರಮುಖ ಸ್ಥಾನ ಹೊಂದಿರುವ ಹುಲಿಗಳು ಪ್ರತಿ ಕಾಡಿನ ಆಕರ್ಷಣೆ ಎನ್ನಿಸಿವೆ.

ಹುಲಿದಿನದ ಮಹತ್ವ

ಹುಲಿದಿನದ ಮಹತ್ವ

ಹುಲಿಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಷ್ಯಾದ ಸೇಂಟ್ ಪೀಟರ್ ಬರ್ಗ್ ಹುಲಿ ಸಮಿತಿ 2010 ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿದಿನವನ್ನಾಗಿ ಆಚರಿಸುವ ಸಂಕಲ್ಪ ಮಾಡಿತು. ಜುಲೈ 29 ಅನ್ನೇ ಆರಿಸಿಕೊಂಡಿದ್ದು ಏಕೆ ಎಂಬುದಕ್ಕೆ ಯಾವುದೇ ಸ್ಪಷ್ಟಕಾರಣಗಳಿಲ್ಲ. ಹುಲಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶಕ್ಕೆ ಯಾವ ದಿನವಾದರೇನು? ಜುಲಗೈ 29 ಒಂದು ಸಾಂಕೇತಿಕ ದಿನವಷ್ಟೇ ಎಂಬುದು ಈ ಹುಲಿ ಸಮಿತಿಯ ಪ್ರತಿಕ್ರಿಯೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
International Tiger Day, is an annual celebration to raise awareness for tiger conservation, held annually on 29 July. Here is an article on the most beautiful and national animal of India, Tiger.
Please Wait while comments are loading...