Jubilee Hills by election results: ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು
Jubilee Hills by election results 2025: ಮೂರು ಸುತ್ತಿನ ಎಣಿಕೆ ಪೂರ್ಣಗೊಂಡ ಬಳಿಕ, ತೆಲಂಗಾಣದ ಹೈದರಾಬಾದ್‌ನ ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ 10,000ಕ್ಕೂ ಹೆಚ್ಚಿನ ಮತಗಳಿಂದ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್ ಸ್ಪಷ್ಟವಾಗಿ 10,000 ಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ ಆಗಿದೆ.
ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆಯು ಅಗ್ನಿಪರೀಕ್ಷೆಯೆನ್ನಲಾಗಿತ್ತು. ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯ ಮತದಾನ ಮಂಗಳವಾರದಂದು ( ನವೆಂಬರ್ 11 ) ನಡೆದಿತ್ತು.

ಈ ವರ್ಷದ ಜೂನ್‌ನಲ್ಲಿ ಭಾರತ ರಾಷ್ಟ್ರ ಸಮಿತಿ ( ಬಿಆರ್‌ಎಸ್ ) ಶಾಸಕ ಮಾಗಂಟಿ ಗೋಪಿನಾಥ್ ಅವರು ನಿಧನರಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆಯು ನಡೆದಿದೆ. ಕಾಂಗ್ರೆಸ್ ಪಕ್ಷದಿಂದ ನವೀನ್ ಯಾದವ್ ಮತ್ತು ಬಿಆರ್‌ಎಸ್‌ನಿಂದ ಮಾಗಂಟಿ ಸುನಿತಾ ಅವರು ಕಣದಲ್ಲಿದ್ದಾರೆ. ಭಾರತೀಯ ಜನತಾ ಪಕ್ಷವು ಎಲ್. ದೀಪಕ್ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಬಿಆರ್‌ಎಸ್ ಅಭ್ಯರ್ಥಿಯು ನಿಧನರಾದ ಜುಬಿಲಿ ಹಿಲ್ಸ್‌ನ ಮಾಜಿ ಶಾಸಕ ಮಾಗಂಟಿ ಗೋಪಿನಾಥ್ ಅವರ ಪತ್ನಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಜುಬಿಲಿ ಹಿಲ್ಸ್‌ನಲ್ಲಿ ಶೇ 48.49 ರಷ್ಟು ಮತದಾನವಾಗಿದೆ. ಒಟ್ಟು 4.01 ಲಕ್ಷ ಅರ್ಹ ಮತದಾರರಲ್ಲಿ 1.94 ಲಕ್ಷ ಮಂದಿ ಮಾತ್ರ ತಮ್ಮ ಮತವನ್ನು ಚಲಾಯಿಸಿದ್ದಾರೆ.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಅಸಾದುದ್ದೀನ್ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್ -ಎ- ಇತ್ತೇಹಾದುಲ್ ಮುಸ್ಲಿಮೀನ್ ( ಎಐಎಂಐಎಂ ) ಪಕ್ಷದ ಬೆಂಬಲವೂ ಇದೆ.
ಜುಬಿಲಿ ಹಿಲ್ಸ್ ಉಪಚುನಾವಣೆಯು ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ. ಲೋಕಸಭೆ ಚುನಾವಣೆಯ ನಂತರದ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯ ಮೇಲೆ ಈ ಫಲಿತಾಂಶ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಹೈದರಾಬಾದ್ ನಗರ ಸೇರಿದಂತೆ ಮುನಿಸಿಪಲ್ ಕಾರ್ಪೋರೇಶನ್ ಅಡಿಯಲ್ಲಿ ಬರುವ ಬಹುತೇಕ ಪ್ರದೇಶಗಳಲ್ಲಿ ಬಿಆರ್‌ಎಸ್ ಪ್ರಾಬಲ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜ್ಯುಬಿಲಿ ಹಿಲ್ಸ್ ಕ್ಷೇತ್ರವು ಮಹತ್ವದ್ದಾಗಿದೆ ಎಂದು ಮಾತುಗಳು ಮುನ್ನೆಲೆಗೆ ಬಂದಿವೆ.












Click it and Unblock the Notifications