ಆಂಧ್ರ ರಾಜಕೀಯ; ಪವನ್ ಕಲ್ಯಾಣ್ ವಶಕ್ಕೆ ಪಡೆದ ಪೊಲೀಸರು!
ಅಮರಾವತಿ, ಸೆಪ್ಟೆಂಬರ್ 10; ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನದ ಬಳಿಕ ರಾಜ್ಯ ರಾಜಕೀಯ ಮತ್ತಷ್ಟು ಕಾವೇರಿದೆ. ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್‌ರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಶನಿವಾರ ರಾತ್ರಿ ಆಂಧ್ರ ಪ್ರದೇಶ ಪ್ರವೇಶಕ್ಕೆ ಪೊಲೀಸರು ಪವನ್ ಕಲ್ಯಾಣ್‌ಗೆ ಅವಕಾಶ ನೀಡಲಿಲ್ಲ. ಆದ್ದರಿಂದ ಆಂಧ್ರ ಪ್ರದೇಶ-ತೆಲಂಗಾಣ ಗಡಿಯ ಜಗ್ಗಯ್ಯಪೇಟ ಚೆಕ್‌ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿ ಅವರು ಪ್ರತಿಭಟನೆ ನಡೆಸಿದರು. ವಿಜಯವಾಡಕ್ಕೆ ಹೋಗಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಬೆಂಗಲಿಗರು ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆಯಿತು. ಬಳಿಕ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪವನ್ ಕಲ್ಯಾಣ್ ಮತ್ತು ಪಿಎಸಿ ಅಧ್ಯಕ್ಷ ನಂದೇನಂಡಲ ಮನೋಹರ್‌ರನ್ನು ವಶಕ್ಕೆ ಪಡೆದರು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆದುಕೊಂಡು ಹೋದರು.
ಎನ್. ಚಂದ್ರಬಾಬು ನಾಯ್ಡು ಬಂಧನದ ಬಳಿಕ ಆಂಧ್ರ ಪ್ರದೇಶದಲ್ಲಿ ಕಾವೇರಿದ ರಾಜಕೀಯ ಪರಿಸ್ಥಿತಿ ಇದೆ. ಪವನ್ ಕಲ್ಯಾಣ್ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಈಗ ಸಹ ಅವರು ಹೋರಾಟ ನಡೆಸಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಂದ್ರಬಾಬು ನಾಯ್ಡು ಬಂಧನ; ಶನಿವಾರ ಮುಂಜಾನೆ ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ರಾಜ್ಯದ ಮಾಜಿ ಮುಖ್ಯಮಂತ್ರಿ, ತೆಲಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡುವನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದರು. ಈ ಬಂಧನದ ಬಳಿಕ ಆಂಧ್ರದ ರಾಜಕೀಯ ಕಾವೇರಿದೆ.
ಆಂಧ್ರ ಪ್ರದೇಶದ ಕೌಶಾಲಾಭಿವೃದ್ಧಿ ನಿಗಮದಲ್ಲಿ ನಡೆದಿರುವ 550 ಕೋಟಿ ರೂ. ಅವ್ಯವಹಾರ ಪ್ರಕರಣದಲ್ಲಿ ಎನ್. ಚಂದ್ರಬಾಬು ನಾಯ್ಡು ಮೊದಲ ಆರೋಪಿ ಎಂದು ಸಿಐಡಿ ಎಡಿಜಿಪಿ ಎನ್. ಸಂಜಯ್ ಹೇಳಿದ್ದಾರೆ. ಅವರು ಸಿಎಂ ಆಗಿದ್ದಾಗ ನಿಗಮಕ್ಕೆ ಬಿಡುಗಡೆಯಾಗಿದ್ದ 3,300 ಕೋಟಿ ರೂ. ಅನುದಾನದಲ್ಲಿ ಅವ್ಯವಹಾರವಾಗಿದ್ದು, ಸರ್ಕಾರಕ್ಕೆ 370 ಕೋಟಿ ರೂ. ವಂಚನೆಯಾಗಿದೆ ಎಂಬುದು ಆರೋಪವಾಗಿದೆ.
ಎನ್. ಚಂದ್ರಬಾಬು ನಾಯ್ಡು ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದ್ದರು. ಶನಿವಾರ ಮುಂಜಾನೆ 6 ಗಂಟೆಗೆ ಬಿಗಿ ಭದ್ರತೆಯಲ್ಲಿ ಅವರನ್ನು ಬಂಧಿಸಿ ವಿಜಯವಾಡಕ್ಕೆ ಕರೆದುಕೊಂಡು ಹೋಗಿದ್ದರು. ಆದ್ದರಿಂದ ಪವನ್ ಕಲ್ಯಾಣ್ ಸಹ ವಿಜಯವಾಡಕ್ಕೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬುದು ಆರೋಪವಾಗಿದೆ. ಎನ್. ಚಂದ್ರಬಾಬು ನಾಯ್ಡು ಬಂಧನದ ಬಳಿಕ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ನಡುವೆ ರಾಜಕೀಯ ಆರೋಪ ಪ್ರತ್ಯಾರೋಪ ಜೋರಾಗಿದೆ. ಆದರೆ ಜಗನ್ ಮೋಹನ ರೆಡ್ಡಿ ಇದುವರೆಗೂ ಚಂದ್ರಬಾಬು ನಾಯ್ಡು ಬಂಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪವನ್ ಕಲ್ಯಾಣ್ ಮತ್ತು ಎನ್. ಚಂದ್ರಬಾಬು ನಾಯ್ಡು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದು, ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎನ್. ಚಂದ್ರಬಾಬು ನಾಯ್ಡು ಬಂಧನ ರಾಜಕೀಯ ತಿರುವು ಪಡೆದುಕೊಂಡಿದೆ.












Click it and Unblock the Notifications