ಹಸುಗೂಸನ್ನು ಕಾಲಿನಿಂದ ಒದ್ದ ಜಾರ್ಖಂಡ ಪೊಲೀಸ್: ಮಗು ಸಾವು- ಸಿಎಂ ತನಿಖೆಗೆ ಆದೇಶ
ರಾಂಚಿ ಮಾರ್ಚ್ 23: ಹಲ್ಲೆ ಪ್ರಕರಣದಲ್ಲಿ ನವಜಾತ ಶಿಶುವಿನ ಅಜ್ಜನನ್ನು ಬಂಧಿಸಲು ನಡೆಸಿದ ದಾಳಿಯ ವೇಳೆ ಪೊಲೀಸರೊಬ್ಬರು ಮಗುವನ್ನು ಬೂಟು ಕಾಲಿನಿಂದ ಒದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಳಿಕ ಹಸುಗೂಸು ಸಾವನ್ನಪ್ಪಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಿಂದ 200 ಕಿಮೀ ದೂರದಲ್ಲಿರುವ ಗಿರಿದಿಹ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಮಗುವಿನ ಅಜ್ಜ ಭೂಷಣ್ ಪಾಂಡೆ ಎಂದು ಗುರುತಿಸಲಾದ ವ್ಯಕ್ತಿ ಹಂಚಿಕೊಂಡ ವಿಡಿಯೊ ಹೇಳಿಕೆ ಹೊರಹೊಮ್ಮಿದ ನಂತರ ಸೋರೆನ್ ಅವರು ಆರೋಪಗಳನ್ನು ತನಿಖೆ ಮಾಡಲು ಪೊಲೀಸರಿಗೆ ಆದೇಶಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಗಿರಿದಿಹ್ ಜಿಲ್ಲೆಯ ಡಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಶೋಡೊಂಗೊ ಗ್ರಾಮದ ಅವರ ಮನೆಯ ಮೇಲೆ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದಾಗ ತಾನು ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಪಾಂಡೆ ಹೇಳಿದ್ದಾರೆ.
"ಬೆಳಿಗ್ಗೆ 3.20 ರ ಸುಮಾರಿಗೆ ಪೊಲೀಸರು ಬಂದಾಗ ನಾನು ಓಡಿಹೋದೆ ... ಆದರೆ ಪೊಲೀಸರು ಮನೆಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ನನ್ನ ಕುಟುಂಬದ ಇತರ ಸದಸ್ಯರೂ ಹೊರಬಂದರು. ಮಗು ಕೋಣೆಯೊಂದರಲ್ಲಿ ಹಾಸಿಗೆಯ ಮೇಲೆ ಮಲಗಿತ್ತು. ಪೋಲೀಸರು ನನ್ನನ್ನು ಹುಡುಕುತ್ತಾ ಹಾಸಿಗೆಯ ಮೇಲೆ ಹತ್ತಿ ಮಗುವನ್ನು ತುಳಿದಿದ್ದಾರೆ. ಕುಟುಂಬ ಸದಸ್ಯರು ಒಳಗೆ ಹೋದಾಗ ಮಗು ಸತ್ತಿರುವುದು ಕಂಡಿದೆ'' ಎಂದು ಭೂಷಣ್ ಪಾಂಡೆ ಹೇಳಿದ್ದಾರೆ.

ತನಿಖೆಗೆ ಆದೇಶಿಸಿದ ಸಿಎಂ
ಭೂಷಣ್ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. "ಜಾರ್ಖಂಡ್ ಪೊಲೀಸರು ಘಟನೆಯನ್ನು ತನಿಖೆ ಮಾಡಿ ಮತ್ತು ವರದಿ ಸಲ್ಲಿಸಿ" ಎಂದು ಸೋರೆನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯ ಪೊಲೀಸರ ಅಧಿಕೃತ ಹ್ಯಾಂಡಲ್ ಮುಖ್ಯಮಂತ್ರಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಗಿರಿಧಿ ಎಸ್ಪಿ ಅಮಿತ್ ರೇಣು ಅವರು ಫೋನ್ ಕರೆಗಳಿಗೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

ಸಾಕ್ಷಿ ನಾಶಕ್ಕೆ ಅವಕಾಶ ಕೊಡಬೇಡಿ- ಮಾಜಿ ಸಿಎಂ
ಇನ್ನೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, 'ಘಟನೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಎಸ್ಪಿಗೆ ತಿಳಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಯಾವುದೇ ಸಾಕ್ಷಿ ನಾಶವಾಗದಂತೆ ಹಿರಿಯ ಅಧಿಕಾರಿಗಳ ತಂಡವನ್ನು ತನಿಖೆಗೆ ಕಳುಹಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಇದೊಂದು ಸುಳ್ಳು ಆರೋಪ'
ಮೇಲ್ನೋಟಕ್ಕೆ ಈ ಆರೋಪ ಸುಳ್ಳು ಎಂದು ತೋರುತ್ತದೆ ಎಂದು ಗಿರಿದಿಹ್ ಉಪ ಆಯುಕ್ತ ನಮನ್ ಪ್ರಿಯೇಶ್ ಲಾಕ್ರಾ ಹೇಳಿದ್ದಾರೆ. "ನಾನು ಎಸ್ಪಿ ಜೊತೆ ಮಾತನಾಡಿದೆ. ಮೇಲ್ನೋಟಕ್ಕೆ ಈ ಆರೋಪ ಸುಳ್ಳು ಎಂದು ತೋರುತ್ತಿದೆ. ಆರೋಪಿ ದಿಕ್ಕು ತಪ್ಪಿಸುವ ತಂತ್ರ ಇದಾಗಿದೆ. ಆದರೆ, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅದರಿಂದ ಸತ್ಯ ಬಯಲಾಗುತ್ತದೆ. ಅದರಂತೆ ನಾವು ಕಾರ್ಯನಿರ್ವಹಿಸುತ್ತೇವೆ'' ಎಂದು ಲಾಕ್ರಾ ಹೇಳಿದರು.
ಮಗುವಿನ ಅಜ್ಜ ಭೂಷಣ್ ಪಾಂಡೆ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಜೊತೆಗೆ ಮಗು ಸಾವಿನ ಬಗ್ಗೆ ತನಿಖೆ ಕೂಡ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಸಾಬೀತಾಗುತ್ತದೆ ಎಂದು ಲಾಕ್ರಾ ಹೇಳಿದರು.












Click it and Unblock the Notifications