
ಜಾರ್ಖಂಡ್: ಪತ್ನಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ
ರಾಂಚಿ ನವೆಂಬರ್ 28: ಪತಿಯೊಬ್ಬ ತನ್ನ ಪತ್ನಿಯ ಮೇಲೆ ಆಸಿಡ್ ಎರಚಿದ ದಾರುಣ ಘಟನೆ ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ನಡೆದಿದೆ. ಆಸಿಡ್ ದಾಳಿಯಲ್ಲಿ ಬಲಿಪಶು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಹೇಳಲಾಗಿದೆ. ಆಕೆಯನ್ನು ರಿಮ್ಸ್(RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಅಮೀರ್ ಎಂದು ಗುರುತಿಸಲಾಗಿದ್ದು, ಆತ ನಮ್ಕುಮ್ ನಿವಾಸಿಯಾಗಿದ್ದಾನೆಂದು ತಿಳಿದುಬಂದಿದೆ.
ಸದ್ಯ ಮಹಿಳೆ ರಿಮ್ಸ್‌ನ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಪತ್ನಿ ಹಿನಾ ಮೇಲೆ ಆಸಿಡ್ ಎರಚಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ಹೀನಾ ತನ್ನ ಮನೆಯಲ್ಲಿ ಮುಖ ತೊಳೆಯುತ್ತಿದ್ದಾಗ ಅಮೀರ್ ಬಂದಿದ್ದು, ಸ್ಟೀಲ್ ಜಗ್‌ನಲ್ಲಿ ಆಸಿಡ್ ಅನ್ನು ಹೀನಾ ಮುಖಕ್ಕೆ ಏಕಾಏಕಿ ಎಸೆದಿದ್ದಾನೆ ಎಂದು ಸಂತ್ರಸ್ತೆಯ ಚಿಕ್ಕಮ್ಮ ಹೇಳಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತಿಯನ್ನು ಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪತಿ ಕ್ರೌರ್ಯಕ್ಕೆ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತನಿಖೆಯಲ್ಲಿ ತೊಡಗಿರುವ ಅಧಿಕಾರಿಗಳು ತಿಳಿಸಿದ್ದಾರೆ.