Jharkhand Election 2024: ಹೇಮಂತ್ ಸೊರೇನ್ ಒಬ್ಬ ಭ್ರಷ್ಟ ಸಿಎಂ: ರಾಜನಾಥ್ ಸಿಂಗ್ ಏಕವಚನದಲ್ಲಿ ವಾಗ್ದಾಳಿ
Jharkhand Election 2024: ಈಗಾಗಲೇ ಲೋಕಸಭೆ ಚುನಾವಣೆ ಮುಗಿದಿದ್ದು, ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ರಾಜ್ಯದ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜಕೀಯ ಕೆಸರೆರಚಾಟಗಳು ಆರಂಭವಾಗಿವೆ. ಹಾಗೆಯೇ ಇದೀಗ ಜಾರ್ಖಂಡ್ ಸಿಎಂ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದಿಗೆ ಆಟವಾಡಿದ ಅತ್ಯಂತ ಭ್ರಷ್ಟ ಸಿಎಂ ಆಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ಜಾರ್ಖಂಡ್‌ನ ಇತ್ಪೋರಿಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೇಮಂತ್ ಸೊರೇನ್ ಅವರನ್ನು ಅಧಿಕಾರದಿಂದ ಕೆಳಗಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಮಯ ಬಂದಿದೆ.

ಹೇಮಂತ್ ಸೊರೇನ್ ಅತ್ಯಂತ ಭ್ರಷ್ಟ ಸಿಎಂ. ಅವರು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದಿಗೆ ಆಟವಾಡಿದ್ದಾರೆ & ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾವುದೇ ಕಳಂಕಿತ ವ್ಯಕ್ತಿಗಳನ್ನು ದೇಶ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಮೆರಿಕ ಪ್ರವಾಸದ ವೇಳೆ ದೇಶವು ಸಿಖ್ ಸಮುದಾಯದವರಿಗೆ ಸುರಕ್ಷಿತ ಅಲ್ಲ ಎಂದು ಅವರು ಹೇಳಿಕೆ ನೀಡಿದ್ದರು. ಈ ಮೂಲಕ ಪ್ರಚೋದನೆ ನೀಡುವಂತಹ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲದೆ, ಹೊರ ದೇಶಗಳಲ್ಲಿ ಭಾರತದ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ವರ್ಷಾಂತ್ಯದಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 20ರಿಂದ ಯಾತ್ರೆ ಆರಂಭ: 1855ರಲ್ಲಿ ಸಂತಾಲ್ ದಂಗೆಯ ನೇತೃತ್ವ ವಹಿಸಿದ್ದ ವೀರ್ ಶಹೀದ್ ಸಿಧು ಕನ್ಹು ಅವರ ಜನ್ಮಸ್ಥಳವಾದ ಭೋಗ್ನಾಡಿಯಲ್ಲಿ ನಿನ್ನೆ (ಸೆಪ್ಟೆಂಬರ್ 20) ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಪರಿವರ್ತನ ಯಾತ್ರೆಗೆ ಚಾಲನೆ ನೀಡಿದ್ದರು. ಈ ಪರಿವರ್ತನಾ ಯಾತ್ರೆ ಅಕ್ಟೋಬರ್ 2ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪರಿವರ್ತನಾ ಯಾತ್ರೆಯು ಸೆಪ್ಟೆಂಬರ್ 20ರಿಂದ ಎರಡು ಭಾಗಗಳಲ್ಲಿ ಪ್ರಾರಂಭವಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಾಹಿಬ್‌ಗಂಜ್‌ನ ಪೊಲೀಸ್ ಲೈನ್ ಮೈದಾನದಿಂದ ಸಂತಾಲ್ ಪರಗಣ ವಿಭಾಗದ ಪರಿವರ್ತನ ಯಾತ್ರೆಯನ್ನು ಉದ್ಘಾಟಿಸಲಿದ್ದರು. ಇದಕ್ಕೂ ಮುನ್ನ ಭೋಗ್ನದಿಹ್‌ನಲ್ಲಿರುವ ವೀರ್ ಸಿಧು ಕನ್ಹು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದರು.
ಧನ್ಬಾದ್ ವಿಭಾಗದ ಪರಿವರ್ತನಾ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಿರಿದಿಹ್ ಜಿಲ್ಲೆಯ ಜಮುವಾ ಜಾರ್ಖಂಡಿ ಧಾಮ್ ಮೈದಾನದಿಂದ ಚಾಲನೆ ನೀಡಿದ್ದರು. ಇದಕ್ಕೂ ಮುನ್ನ ಅವರು ಜಾರ್ಖಂಡ್ ಧಾಮ್‌ನಲ್ಲಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications