ನಾನೇ ನಿಜವಾದ ಜೆಡಿಎಸ್ ಅಧ್ಯಕ್ಷ, ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ: ಪಕ್ಷದ ಮೇಲೆ ಹಕ್ಕು ಚಲಾಯಿಸಿದ ಸಿಎಂ ಇಬ್ರಾಹಿಂ
ಬೆಂಗಳೂರು, ಅಕ್ಟೋಬರ್ 16: ಎನ್‌ಡಿಎಗೆ ಜೆಡಿಎಸ್ ಸೇರ್ಪಡೆಯಾಗುತ್ತಿರುವುದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು ಪಕ್ಷದ ಮೇಲೆ ಹಕ್ಕು ಚಲಾಯಿಸಲು ಯತ್ನ ನಡೆಸಿದ್ದಾರೆ.
ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಕೋರ್ ಕಮಿಟಿ ರಚಿಸಿ ರಾಜ್ಯ ಪ್ರವಾಸ ಮಾಡುವುದಾಗಿ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಆದರೆ, ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
'ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರಲ್ಲಿ ಎಷ್ಟು ಮಂದಿ ಪಕ್ಷದಲ್ಲಿ ಉಳಿಯುತ್ತಾರೆ ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.

'ಬಿಜೆಪಿ ಜೊತೆಗಿನ ಮೈತ್ರಿಯನ್ನು ನಾನು ವಿರೋಧಿಸುತ್ತೇನೆ. ಯಾರು ಯಾರ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಎಚ್‌ಡಿ ದೇವೇಗೌಡರಿಗೆ ನಮ್ಮ ಸಂದೇಶವನ್ನು ತಿಳಿಸುತ್ತೇನೆ. ಅವರು ಅದಕ್ಕೆ ಒಪ್ಪದಿದ್ದರೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಇಬ್ರಾಹಿಂ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮೈತ್ರಿ ಕುರಿತು ಮಾತನಾಡಲು ಅಮಿತ್ ಶಾ ಅವರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಿದ್ದಾರೆ. ಇದು ತಪ್ಪು ಎಂಬುದಾಗಿ ಸಿಎಂ ಇಬ್ರಾಹಿಂ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಜಾತ್ಯತೀತ ಸಿದ್ದಾಂತ ಹೊಂದಿದ್ದಕ್ಕಾಗಿ ಎಚ್‌ಡಿ ದೇವೇಗೌಡರು ಪ್ರಧಾನಿಯಾದರು. ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಎನ್‌ಡಿಎಯನ್ನು ಸೋಲಿಸಬೇಕು. ನಾವು ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧರಿದ್ದೇವೆ. ನಾವೇ ಮೂಲ ಜೆಡಿಎಸ್. ಯಾರೂ ನನ್ನನ್ನು ತೆಗೆದುಹಾಕಲು ಸಾಧ್ಯವಿಲ್ಲ' ಎಂದು ಇಬ್ರಾಹಿಂ ಹೇಳಿದರು.
ಬಿಜೆಪಿ ಜೊತೆಗಿನ ಮೈತ್ರಿಯಿಂದ ಎಚ್‌ಡಿ ದೇವೇಗೌಡರು ಸಂತೋಷವಾಗಿಲ್ಲ ಎಂದು ಇಬ್ರಾಹಿಂ ತಿಳಿಸಿದರು.
'ಎಚ್‌ಡಿ ದೇವೇಗೌಡರು ನೋವಿನಲ್ಲಿದ್ದಾರೆಂದು ನನಗೆ ತಿಳಿದಿದೆ. ಆದರೆ ಕೆಲವು ಶಕ್ತಿಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶ ನೀಡುತ್ತಿಲ್ಲ. ಇನ್ನೂ ಮೈತ್ರಿಯಿಂದ ಹಿಂದೆ ಸರಿಯಲು ಸಮಯವಿದ್ದು ಹೀಗೆ ಮಾಡಿದರೆ ನೀವು ( ಎಚ್‌ಡಿ ಕುಮಾರಸ್ವಾಮಿ ) ಹೀರೋ ಆಗುತ್ತೀರಿ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಪಕ್ಷದ ಘಟಕಗಳು ಮೈತ್ರಿಯನ್ನು ವಿರೋಧಿಸಿವೆ' ಎಂದು ಅವರು ಹೇಳಿದರು.












Click it and Unblock the Notifications