ಜಯಾ ಬೇಲ್ ನಿರಾಕರಣೆ:ಉಡುಪಿ ಹೋಟೆಲ್ ಮೇಲೆ ದಾಳಿ
ಚೆನ್ನೈ, ಅ 8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಬೇಲ್ ನಿರಾಕರಿಸಿದ ಬೆನ್ನಲ್ಲೇ, ಎಐಡಿಎಂಕೆ ಕಾರ್ಯಕರ್ತರು ಉಡುಪಿ ಹೋಟೆಲೊಂದರ ಮೇಲೆ ದಾಳಿ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೊದಲಿಗೆ ಜಯಾಗೆ ಜಾಮೀನು ಸಿಕ್ಕಿತು ಎನ್ನುವ ಸುದ್ದಿ ಕೇಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಎಐಡಿಎಂಕೆ ಕಾರ್ಯಕರ್ತರು ನಂತರ ಬೇಲ್ ನಿರಾಕರಸಿದ ಘಟನೆ ಕೇಳಿ ನಗರದ 'ಡೇಟಾ ಉಡುಪಿ ಹೋಟೆಲ್ ' ಮೇಲೆ ಕಲ್ಲು ತೂರಾಟ ಮಾಡಿ ಗಾಜು, ಕುರ್ಚಿಗಳನ್ನು ಪುಡಿಗೈದಿದ್ದಾರೆ.

ಅಲ್ಲದೇ, ಕರ್ನಾಟಕ ಸರಕಾರ ಮತ್ತು ಕನ್ನಡಿಗರ ವಿರುದ್ದ ಧಿಕ್ಕಾರ ಕೂಗಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ. ಈ ಘಟನೆ ಮಂಗಳವಾರ (ಅ 7) ನಡೆದಿದ್ದು, ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. (ಜಯಾಗೆ ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ)
ಕರ್ನಾಟಕ ಹೈಕೋರ್ಟಿನಿಂದ ಜಯಲಲಿತಾ ಅವರಿಗೆ ಜಾಮೀನು ಸಿಗದಿದ್ದರೆ ತಮಿಳುನಾಡಿನಲ್ಲಿರುವ ಲಕ್ಷಾಂತರ ಕನ್ನಡಿಗರಿಗೆ ದಿಗ್ಬಂಧನ ಹಾಕಲಾಗುವುದು ಎನ್ನುವ ಬ್ಯಾನರುಗಳು ಚೆನ್ನೈನಗರದ ಮೂಲೆ ಮೂಲೆಗಳಲ್ಲಿ ಹಾಕಲಾಗಿತ್ತು.
ಈ ಬ್ಯಾನರಿಗೆ ವ್ಯಾಪಕವಾಗಿ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ತಕ್ಷಣವೇ ಬ್ಯಾನರುಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿತ್ತು. ನಮ್ಮ ಗಮನಕ್ಕೆ ಬಾರದೇ ಈ ಬ್ಯಾನರನ್ನು ಮುದ್ರಿಸಲಾಗಿದೆ. ಕನ್ನಡಿಗರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪತ್ರಿಕಾ ಹೇಳಿಕೆ ನೀಡಿದ್ದರು.
ಬ್ಯಾನರ್ ಬಗ್ಗೆ ಪ್ರತಿಕ್ರಿಯಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಯಾ ಕೇಸಿಗೂ ರಾಜ್ಯಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲೂ ತಮಿಳರು ಇದ್ದಾರೆ. ತಮಿಳುನಾಡಿನಲ್ಲೂ ಕನ್ನಡಿಗರಿದ್ದಾರೆ. ಆಯಾಯ ರಾಜ್ಯದ ಜನರ ರಕ್ಷಣೆ, ಆಯಾಯ ರಾಜ್ಯಗಳ ಕರ್ತವ್ಯ ಎಂದಿದ್ದರು.
ತಮಿಳುನಾಡಿನ ವಡಲೂರು ವೃತ್ತದ ಬಳಿ ಕರ್ನಾಟಕ ನೊಂದಾಣಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ (ಅ 8) ವರದಿಯಾಗಿದೆ. (ಸಂಗ್ರಹ ಚಿತ್ರ: ಪಿಟಿಐ)












Click it and Unblock the Notifications