Jammu & Kashmir Election: ಬಿಜೆಪಿ ಇರುವವರೆಗೂ ಮೀಸಲಾತಿಯನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ; ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಎಲ್ಲಾ ಪಕ್ಷಗಳು ಮತ್ತೊಂದು ಸುತ್ತಿನ ಭರ್ಜರಿ ಪ್ರಚಾರ ನಡೆಸುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಜಮ್ಮು ಮತ್ತು ಕಾಶ್ಮೀರದ ಥಾನಮಂಡಿ ಪ್ರದೇಶದಲ್ಲಿ ಶನಿವಾರ ಬಿಜೆಪಿ ಪರ ಪ್ರಚಾರ ನಡೆಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ಟೀಕಿಸಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರವನ್ನು ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಅಭಿವೃದ್ಧಿಯಿಂದ ವಂಚಿತಗೊಳಿಸಿವೆ ಎಂದು ಆರೋಪಿಸಿದರು.
ಥಾನಮಂಡಿ ಮತ್ತು ರಜೌರಿಯಲ್ಲಿ ನಡೆದ ಬಿಜೆಪಿ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಥಾನಮಂಡಿ ಪ್ರದೇಶವು ಅಭಿವೃದ್ಧಿಯಿಂದ ವಂಚಿತವಾಗಿದೆ, ಫಾರೂಕ್ ಅಬ್ದುಲ್ಲಾ ಅವರೇ ನೀವು ಗುಜ್ಜರ್ ಬಕರ್ವಾಲ್ ಮತ್ತು ಪಹಾಡಿ ಸಹೋದರರು ಅಭಿವೃದ್ಧಿ ಹೊಂದಲು ಯಾಕೆ ಬಿಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.

ಹಲವು ವರ್ಷಗಳಿಂದ ಇಲ್ಲಿ ಅಧಿಕಾರ ನಡೆಸಿದವರು ಭಯೋತ್ಪಾದನೆಯನ್ನು ಹರಡಿ ನಿಮ್ಮ ಹಕ್ಕುಗಳನ್ನು ಕಸಿದುಕೊಮಡಿದ್ದಾರೆ. ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ, ಭಾರತದಲ್ಲಿ ಮೀಸಲಾತಿ ಕೊನೆಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಎಂದಿಗೂ ಮೀಸಲಾತಿಗೆ ವಿರುದ್ಧವಾಗಿದೆ. ಬಿಜೆಪಿ ಇರುವವರೆಗೆ ಯಾರೂ ಮೀಸಲಾತಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನು ಮುಂದೆ ನಿಮ್ಮ ಮಕ್ಕಳಿಗೆ ರೈಲುಗಳನ್ನು ತೋರಿಸಲು ಜಮ್ಮುವಿಗೆ ಕರೆದುಕೊಂಡು ಹೋಗಬೇಕಾಗಿಲ್ಲ, ಪೂಂಚ್ ಮತ್ತು ರಜೌರಿಗೆ ಶೀಘ್ರದಲ್ಲೇ ರೈಲು ಸಂಪರ್ಕ ಸಿಗಲಿದೆ, ಇಲ್ಲಿಂದಲೇ ನೇರವಾಗಿ ದೆಹಲಿಗೆ ಬರಬಹುದು ಎಂದು ಹೇಳಿದ್ದಾರೆ.
ಕುಟುಂಬಗಳ ಆಡಳಿತಕ್ಕೆ ಕೊನೆ
ಜಮ್ಮು ಮತ್ತು ಕಾಶ್ಮೀರದಲ್ಲಿ 75 ವರ್ಷಗಳಿಂದ ಅಬ್ದುಲ್ಲಾ, ಗಾಂಧಿ, ನೆಹರು, ಮುಫ್ತಿ ಕುಟುಂಬಗಳು ಆಡಳಿತ ನಡೆಸಿವೆ ಆದರೆ ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸುತ್ತದೆ ಎಂದರು.
ಮೂರು ಪಕ್ಷಗಳು ಪ್ರಜಾಪ್ರಭುತ್ವವನ್ನು ತುಳಿದಿದ್ದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಇಲ್ಲಿ ಗ್ರಾಮ ಪಂಚಾಯತ್ ಮತ್ತು ತಹಸಿಲ್ ಪಂಚಾಯತ್ ಚುನಾವಣೆಗಳು ನಡೆದಿವೆ. ಯುವಕರು ಪ್ರಜಾಪ್ರಭುತ್ವದ ಪರಿಚಯ ಮಾಡಿಕೊಂಡಿದ್ದಾರೆ, ಈ ಯುವಕರು ಮುಂದಿನ ದಿನಗಳಲ್ಲಿ ಶಾಸಕರು, ಸಂಸದರು ಆಗಲಿದ್ದಾರೆ ಎಂದರು.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿ ಭಯೋತ್ಪಾದನೆ ಕೊನೆಯಾಗಿದೆ. ನಾವು ಇಲ್ಲಿನ ಯುವಕರಿಗೆ ಕಲ್ಲಿನ ಬದಲಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಿದ್ದೇವೆ ಎಂದು ಹೇಳಿದರು.
ಸೆಪ್ಟೆಂಬರ್ 25 ರಂದು ಎರಡನೇ ಹಂತದ ಚುನಾವಣೆಗೆ ಮುನ್ನ ಅಮಿತ್ ಶಾ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಡೆಗಳಲ್ಲಿ ಅವರು ಬಿಜೆಪಿ ಮತ್ತು ಮಿತ್ರಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.












Click it and Unblock the Notifications