ಜಮ್ಮು ಮತ್ತು ಕಾಶ್ಮೀರ: ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ವಾಲ್ಮೀಕಿ ಸಮುದಾಯ
ಶ್ರೀನಗರ, ಸೆಪ್ಟೆಂಬರ್ 08: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024 ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ತಂತ್ರಗಳನ್ನು ರೂಪಿಸಿ ಚುನಾವಣಾ ಕಣಕ್ಕೆ ಧುಮುಕಿವೆ.
ಈ ಬಾರಿಯ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಲವು ಕಾರಣಕ್ಕೆ ಮಹತ್ವವನ್ನು ಪಡೆದಿದೆ. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ರದ್ದುಪಡಿಸಿತ್ತು. ಈ ಮಹತ್ವದ ಬೆಳವಣಿಗೆ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ವಾಲ್ಮೀಕಿ ಸಮಯದಾಯದಿಂದ ಮತದಾನ: ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದವರು ಮತದಾನವನ್ನು ಮಾಡಲಿದ್ದಾರೆ. ರಾಜ್ಯದಲ್ಲಿ ಸುಮಾರು 350 ವಾಲ್ಮೀಕಿ ಸಮುದಾಯದ ಕುಟುಂಬಗಳಿವೆ. ಆದರೆ ಸಂವಿಧಾನದ 370ನೇ ವಿಧಿ ಮತ್ತು 35ಎ ಅನ್ವಯ ಅವರಿಗೆ ಮತದಾನದ ಹಕ್ಕನ್ನು ನೀಡಿರಲಿಲ್ಲ. ಈಗ ಸಂವಿಧಾನದ 370ನೇ ವಿಧಿ ರದ್ದುಗೊಂಡಿರುವ ಕಾರಣ ಸಮುದಾಯ ಮೊದಲ ಬಾರಿಗೆ ಮತದಾನ ಮಾಡಲಿದೆ.
1957ರಲ್ಲಿ ಸಮುದಾಯದವರು ಪಂಜಾಬ್‌ನಿಂದ ಜಮ್ಮಿವಿಗೆ ಆಗಮಿಸಿದರು. ಸರ್ಕಾರದ ಕೆಲಸಕ್ಕಾಗಿಯೇ ಅವರು ಆಗಮಿಸಿದರೂ ಸಹ ಈ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ಖಾಯಂ ನಿವಾಸಿಗಳ ಸ್ಥಾನಮಾನವನ್ನು ನೀಡಲಿಲ್ಲ. ರಾಜ್ಯದ ಉಳಿದ ಸಮುದಾಯಕ್ಕೆ ನೀಡುವಂತೆ ಮತದಾನದ ಹಕ್ಕನ್ನು ಸಹ ನೀಡಲಿಲ್ಲ. ರಾಜ್ಯದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ವಾಸಿಸುತ್ತಿರು ವಾಲ್ಮೀಕಿ ಸಮುದಾಯದ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲೇ ಇಲ್ಲ.
ಆದರೆ 2019ರಲ್ಲಿ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಯಿತು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ 6 ದಶಕಗಳ ಬಳಿಕ 2020ರಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸ್ಥಳೀಯ ನಿವಾಸಿಗಳ ಪತ್ರಗಳನ್ನು ವಿತರಣೆ ಮಾಡಲಾಯಿತು. ಈಗ ವಿಧಾನಸಭೆ ಚುನಾವಣೆ ಎದುರಾಗಿದೆ, ವಾಲ್ಮೀಕಿ ಸಮುದಾಯದ ಸುಮಾರು 10,000 ಜನರು ಮತದಾನ ಮಾಡುವ ಅರ್ಹತೆಯನ್ನು ಪಡೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಬಹುಮುಖ್ಯವಾಗಿದೆ. 2024ರ ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ. ಅಲ್ಲದೇ ಸಂವಿಧಾನದ 370ನೇ ವಿಧಿರದ್ದುಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು.
ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಪರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಬಯಸಿದ್ದು, ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಕೇಳಿದರೆ ಬೆಂಬಲಿಸುವ ಆಯ್ಕೆಯನ್ನು ಇಟ್ಟುಕೊಂಡಿದೆ. ಭಾನುವಾರ ಬಿಜೆಪಿ ಚುನಾವಣೆಗಾಗಿ 10 ಅಭ್ಯರ್ಥಿಗಳ 6ನೇ ಪಟ್ಟಿಯನ್ನು ಬಿಡುಡೆ ಮಾಡಿದೆ.
ವಿಧಾನಸಭೆ ಚುನಾವಣೆ ಕುರಿತು ಈಗಾಗಲೇ ಪ್ರಕಟಗೊಂಡ ಎರಡು ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಜಯಗಳಿಸಲಿದೆ ಎಂದು ಅಂದಾಜಿಸಿದೆ. ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಟಿಎಂಸಿ ಪಕ್ಷಗಳು ಈ ಮೈತ್ರಿಕೂಟದಲ್ಲಿವೆ. ಆದರೆ ರಾಜ್ಯದಲ್ಲಿ ಬಿಜೆಪಿ ಸಹ ಅಧಿಕಾರ ಹಿಡಿಯಲೇಬೇಕು ಎಂದು ಬಿರುಸಿನ ಪ್ರಚಾರವನ್ನು ನಡೆಸುತ್ತಿದೆ.












Click it and Unblock the Notifications