ಶಾಲಾ ನಿರ್ದೇಶಕಿ- ಪೋಷಕಿ ಜಟಾಜಟಿ ಜಂಗೀ ಕುಸ್ತಿ
ಜಲಂಧರ್, ಏ.24: ಇಬ್ಬರು ಮಹಿಳೆಯರ ನಡುವಿನ ಜಟಾಜಟಿ ವಿಡಿಯೋ ಯೂಟ್ಯೂಬ್ ನಲ್ಲಿ ಹಬ್ಬುತ್ತಿದೆ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ಚರ್ಚೆಗೊಳಗಾಗುತ್ತಿದೆ. ಶಾಲಾ ವಿದ್ಯಾರ್ಥಿ/ನಿಯರು ಶಾಲೆಗೆ ಮೊಬೈಲ್ ಫೋನ್ ತರುವುದು ಎಷ್ಟು ಸರಿ? ಎಂಬುದು ಚರ್ಚೆಗೊಳಲಾಗುತ್ತಿದೆ.
ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೊಬೈಲ್ ಫೋನ್ ತಂದಿದ್ದ ವಿದ್ಯಾರ್ಥಿನಿ ಬಳಿ ಇದ್ದ ಮೊಬೈಲ್ ಫೋನ್ ನನ್ನು ಶಾಲಾ ಸಿಬ್ಬಂದಿ ಕಸಿದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಬಂದ ವಿದ್ಯಾರ್ಥಿನಿ ಪೋಷಕಿ ಹಾಗೂ ಶಾಲಾ ನಿರ್ದೇಶಕಿ ನಡುವೆ ನಡೆದ ವಾಕ್ಸಮರ ಕೊನೆಗೆ ತಾರಕಕ್ಕೇರಿ ಇಬ್ಬರು ಜಡೆ ಹಿಡಿದು ಗೋಡೆಗೆ ಗುದ್ದಾಡಿದ ಘಟನೆ ನಡೆಯಿತು.

ಈ ಘಟನೆ ನಂತರ ಶಾಲಾ ಸಿಬ್ಬಂದಿ ಇಬ್ಬರನ್ನು ಬಿಡಿಸಲು ಹೆಣಗಾಟ ನಡೆಸಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ತಾಯಿ ವಿರುದ್ಧ ಶಾಲಾ ಆಡಳಿತ ಮಂಡಳಿ ದೂರು ನೀಡಿದೆ. ಶಾಲಾ ನಿರ್ದೇಶಕಿಯನ್ನು ಹೊಡೆದ ವಿದ್ಯಾರ್ಥಿನಿಯ ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐ ಆರ್ ಹಾಕಿ, ತನಿಖೆ ಕೈಗೊಂಡಿದ್ದಾರೆ.
ಮೇಯರ್ ವರ್ಲ್ಡ್ ಸ್ಕೂಲ್‌ನ ನಿರ್ದೇಶಕಿ ಜ್ಯೋತಿ ನಾಗರಾಣಿ ಹಾಗೂವಿದ್ಯಾರ್ಥಿನಿ ತಾಯಿ ತರಣ್‌ಜಿತ್ ಕೌರ್ ಹುಂಡಾಲ್ ನಡುವೆ ನಡೆದ ಜಟಾಪಟಿ ಈಗ ಲೋಕ ಪ್ರಸಿದ್ಧಿಯಾಗಿದೆ.
ಪೊಲೀಸರು ಆಕೆ ವಿರುದ್ಧ ಐಪಿಸಿ ಸೆಕ್ಷನ್ 451 ಮತ್ತು 452 ಅನ್ವಯ ಪ್ರಕರಣ ದಾಖಲಿಸಿಕೊಂಡರೂ ಶಾಲಾ ಮಂಡಳಿ ಸದಸ್ಯರು ತೃಪ್ತರಾಗಿಲ್ಲ. ಕೊಲೆ ಯತ್ನದ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಈಗ ಕಾನೂನು ಸಮರ ಆರಂಭವಾಗಿದ್ದು, ಈ ನಡುವೆ ವಿದ್ಯಾರ್ಥಿನಿ ಓದಿನ ಕಥೆ ಅಧೋಗತಿಯಾಗಿದೆ.












Click it and Unblock the Notifications