ಸಿ.ಎಂ ಚಂದ್ರಬಾಬು ನಾಯ್ಡು ವಿರುದ್ಧ "ದೆಹಲಿ"ಯಲ್ಲಿ ದೂರು ಕೊಡ್ತೀನಿ ಅಂದಿದ್ಯಾರು ?
ಆಂಧ್ರಪ್ರದೇಶದ ತಿರುಪತಿ ಪ್ರಸಾದವಾದ ಲಡ್ಡಿನ ಬಗ್ಗೆ ಎದ್ದಿರುವ ವಿವಾದ ಇದೀಗ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಇದೀಗ ಈ ಸಂಬಂಧ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ ರೆಡ್ಡಿ ಮಾತನಾಡಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಚಂದ್ರಬಾಬು ನಾಯ್ಡುಗೆ ಪ್ರಶ್ನೆಗಳ ಸುರಿಮಳೆಯನ್ನೇ ಜಗನ್ ಮೋಹನ ರೆಡ್ಡಿ ಸುರಿಸಿದ್ದಾರೆ.
ದೇವರನ್ನೂ ಬಿಡದ ಚಂದ್ರಬಾಬು ನಾಯ್ಡು: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜಕೀಯ ಇಚ್ಛಶಕ್ತಿಗಾಗಿ ದೇವರ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾರೆ. ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 100 ದಿನ ಪೂರೈಸುತ್ತಿದ್ದಾರೆ. ಆದರೆ, ಈ ಅವಧಿಯಲ್ಲಿ ಅವರು ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಬಾಬು ಅವರೇ ನೀವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಏನಾದವು ಎಂದು ಆಂಧ್ರಪ್ರದೇಶದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅದರಿಂದ ತಪ್ಪಿಸಿಕೊಳ್ಳುವ ಏಕೈಕ ಕಾರಣದಿಂದ ಚಂದ್ರಬಾಬು ನಾಯ್ಡು ಅವರು, ತಿರುಪತಿ ಲಡ್ಡಿನ ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚಂದ್ರಬಾಬು ನಾಯ್ಡು ವಿರುದ್ಧ ದೂರು
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸತ್ಯವನ್ನು ತಿರುಚಿದ್ದಾರೆ. ಅವರು ಸತ್ಯವನ್ನು ಹೇಗೆ ತಿರುಚಿದ್ದಾರೆ, ಅವರ ವಿರುದ್ಧ ಯಾವ ಕಾರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಸಿಬಿಐ ತನಿಖೆಯಾಗಲಿ ಎಂದ ಶರ್ಮಿಳಾ
ಇನ್ನು ತಿರುಪತಿ ಲಡ್ಡಿನ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಹಾಗೂ ಆಂಧ್ರ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈಎಎಸ್ ಶರ್ಮಿಳಾ ಮಾತನಾಡಿದ್ದು, ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ತಿರುಪತಿಯ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಇದೆ ಎನ್ನುವುದು ಅತ್ಯಂತ ಗಂಭೀರ ವಿಷಯ. ಹೀಗಾಗಿ ಇದನ್ನು ಕೇಂದ್ರೀಯ ತನಿಖಾ ದಳದ ತನಿಖೆಗೆ ಒಪ್ಪಿಬೇಕು ಎಂದು ಶರ್ಮಿಳಾ ಅವರು ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವುದಾಗಿಯೂ ಹೇಳಿದ್ದಾರೆ.
ಈ ವಿಚಾರ ಆಂಧ್ರಪ್ರದೇಶ ಮಾತ್ರವಲ್ಲದೆ ದೇಶ - ವಿದೇಶದಲ್ಲಿ ಇರುವ ಕೋಟ್ಯಾಂತರ ಜನ ಭಕ್ತರ ಭಾವನೆಗೆ ಸಂಬಂಧಿಸಿದ ವಿಚಾರವಾಗಿದೆ. ಅಲ್ಲದೇ ಕೋಟ್ಯಾಂತ ಜನರ ನಂಬಿಕೆಯಾಗಿದೆ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ನಾವು (ಕಾಂಗ್ರೆಸ್) ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಆಂಧ್ರ ಪ್ರದೇಶ ಮಾತ್ರವಲ್ಲದೇ ಈ ವಿಷಯ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಕೋಟ್ಯಾಂತರ ಭಕ್ತರು ಈ ವಿಷಯವನ್ನು ಕೇಳಿ ಶಾಕ್ ಆಗಿದ್ದಾರೆ. ತಿರುಪತಿ ಲಡ್ಡಿನ ಬಗ್ಗೆ ಹಿಂದೂಗಳಲ್ಲಿ ವಿಶೇಷ ಭಕ್ತಿ ಹಾಗೂ ಅಭಿರುಚಿ ಇದೆ. ಆದರೆ, ಈಗ ಕೇಳಿ ಬಂದಿರುವ ಆರೋಪ ಹಿಂದೂಗಳನ್ನು ಆಘಾತಕ್ಕೆ ದೂಡಿದೆ.












Click it and Unblock the Notifications