ಐಎಸ್‌ಐಎಸ್ ಸೇರುವ ಯುವಕರಿಗೆ ಹಣ, ಕೆಲಸದ ಆಮಿಷ
ತಿರುವನಂತಪುರಂ, ಸೆಪ್ಟೆಂಬರ್ 23 : ಐಎಸ್ಐಎಸ್ ಉಗ್ರರು ತಮ್ಮ ವಿಚಾರಧಾರೆಗಳತ್ತ ಆಕರ್ಷಿತರಾದವರನ್ನು ಮಾತ್ರ ಸಂಘಟನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಸಂಘಟನೆಗೆ ಸೇರುವಂತೆ ಯುವಕರಿಗೆ ಹಣ ಮತ್ತು ಉದ್ಯೋಗದ ಆಮಿಷವನ್ನು ವೊಡ್ಡುತ್ತಿದ್ದರು ಎಂಬುದು ಕೇರಳ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ರಿಯಾಬ್ ಉಲ್ ರೆಹೆಮಾನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿರುವ ಕೇರಳದ ಪೊಲೀಸರಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಎಸ್) ಉಗ್ರರು ಸಂಘಟನೆ ಸೇರುವಂತೆ ಯುವಕರಿಗೆ ಆಮಿಷವೊಡ್ಡುತ್ತಿರುವ ಮಾಹಿತಿ ತಿಳಿದುಬಂದಿದೆ. [ISISಗೆ ಬೆಂಬಲ ಇಬ್ಬರ ಗಡಿಪಾರು]

ಕೇರಳ ಪೊಲೀಸರು ಹಲವಾರು ಜನರನ್ನು ವಿಚಾರಣೆ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಐಎಸ್‌ಐಎಸ್ ಪರವಾಗಿ ಕೆಲಸ ಮಾಡುತ್ತಾರೆ ಎಂದು ಯುಎಇನಿಂದ ಗಡಿಪಾರಾದವರನ್ನು ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. [ಉಗ್ರ ಸಂಘಟನೆ ಸೇರಿದ ಮತ್ತೊಬ್ಬ ಕೇರಳ ಯುವಕ]
ಐಎಸ್‌ಐಎಸ್ ಮಲ್ಲಪುರಂನ ಇಬ್ಬರು ಹಿಂದೂ ಯುವಕರು ಸೇರಿದಂತೆ ಹಲವು ಯುವಕರನ್ನು ಸಂಪರ್ಕಿಸಿದ ಬಗ್ಗೆ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಉತ್ತಮ ಉದ್ಯೋಗ ಮತ್ತು ಹೆಚ್ಚಿನ ಹಣ ನೀಡುವುದಾಗಿ ಯುವಕರಿಗೆ ಆಮಿಷವೊಡ್ಡಿರುವುದು ಹಾಗೂ ಸಿರಿಯಾಕ್ಕೆ ಹೋಗಲು ಹಣದ ಸಹಾಯ ಮಾಡುವುದಾಗಿ ಉಗ್ರರು ಭರವಸೆ ನೀಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಐಎಸ್‌ಐಎಸ್ ವಿಚಾರಧಾರೆಗಳಿಂದ ಆಕರ್ಷಿತರಾಗಿ ಸಂಘಟನೆ ಸೇರುತ್ತೇವೆ ಎಂದು ಯುವಕರು ಮುಂದೆ ಬಂದರೆ ಉಗ್ರರ ಕೆಲಸ ಸುಲಭವಾಗುತ್ತದೆ. ಸದ್ಯ, ಸಿರಿಯಾದಲ್ಲಿದ್ದಾನೆ ಎಂದು ಆರೋಪಿಸಲಾಗಿರುವ ರಿಯಾಬ್ ಉಲ್ ರೆಹೆಮಾನ್ ಹಲವಾರು ಯುವಕರಿಗೆ ಕರೆ ಮಾಡಿ ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದಾನೆ ಎಂದು ಯುಎಇನಿಂದ ಗಡಿಪಾರಾದವರು ಪೊಲೀಸರಿಗೆ ತಿಳಿಸಿದ್ದಾರೆ.
ಐಎಸ್‌ಐಎಸ್ ಸೇರುವಂತೆ ಐವರು ಭಾರತೀಯ ಯುವಕರಿಗೆ ರಿಯಾಬ್ ಆಹ್ವಾನ ನೀಡಿದ್ದಾನೆ ಎಂದು ತಿಳಿದುಬಂದಿದ್ದು, ಪೊಲೀಸರು ಇವರ ಹುಡುಕಾಟ ನಡೆಸುತ್ತಿದ್ದಾರೆ. ಮಲ್ಲಪುರಂನ ಇಬ್ಬರು ಯುವಕರು ಮತ್ತು ಯುಎಇನಿಂದ ಗಡಿಪಾರಾದ ಇಬ್ಬರು ಐದು ಜನರಲ್ಲಿ ಸೇರಿದ್ದಾರೆ.












Click it and Unblock the Notifications