ಹೊಸ ಪಕ್ಷ ಯೋಜಿಸುತ್ತಿದ್ದಾರಾ ಸಚಿನ್ ಪೈಲಟ್?
ಜೈಪುರ, ಜೂನ್ 3: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಯ ನಡುವೆ ರಾಜಕೀಯ ಒಳ ಬೇಗುದಿ ಹೆಚ್ಚಾಗುತ್ತಿದೆ. ಆದರೆ ಬಂಡಾಯ ನಾಯಕ ಸಚಿನ್ ಪೈಲಟ್ ಅಂತಿಮವಾಗಿ ಸಾಹಸಕ್ಕೆ ಕೈಹಾಕಿದ್ದು ಹೊಸ ಪಕ್ಷವನ್ನು ಕಟ್ಟಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಹಿಂದಿನಿಂದಲೂ ಭಿನ್ನಾಭಿಪ್ರಾಯವಿದೆ. ಆದಾಗ್ಯೂ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಭದ್ರನೆಲೆ ಉಳಿಸಿಕೊಂಡಿದೆ ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ನಾಯಕರು ಹೇಳಿದ್ದಾರೆ.

ಸಚಿನ್ ಪೈಲಟ್ ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಾದ ಜೂನ್ 11 ರಂದು ದೌಸಾದಲ್ಲಿ ಹೊಸ ಪಕ್ಷವನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಪೈಲಟ್ ತನ್ನ ಜನರನ್ನು ಸೇರಿಸಿ ಭೇಟಿಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿವೆ. ಆದರೆ, ಪೈಲಟ್ ಇದುವರೆಗೆ ಯಾವುದೇ ಘೋಷಣೆ ಮಾಡಿಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ, ಪೈಲಟ್‌ಗೆ ಬೇರೆ ಯಾವುದೇ ಆಯ್ಕೆಗಳಿಲ್ಲದ ಕಾರಣ ಅವರು ತಮ್ಮ ಚಳುವಳಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ಅಂತಿಮವಾಗಿ ಜೂನ್ 11 ರಂದು ಹೊಸ ಪಕ್ಷವನ್ನು ಘೋಷಿಸಲು ತಂತ್ರವನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಹಿಂದಿನ ವಸುಂಧರಾ ರಾಜೇ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೈಲಟ್ ಒತ್ತಾಯಿಸಿ ಕೆಲ ವಾರಗಳ ಹಿಂದೆ ಕಾಂಗ್ರೆಸ್‌ನ ರಾಜಸ್ಥಾನ ಘಟಕದಲ್ಲಿ ಆಂತರಿಕ ಕಲಹ ಏರ್ಪಟ್ಟಿತ್ತು. ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಗೆಹ್ಲೋಟ್ ಮತ್ತು ಪೈಲಟ್ ಅವರೊಂದಿಗೆ ಪ್ರತ್ಯೇಕವಾಗಿ ಸೋಮವಾರ ಸರಣಿ ಸಭೆ ಮಾಡಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಹೊಸ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವ ಸಾಧ್ಯತೆಯಿರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಮಹತ್ವದ ಸವಾಲುಗಳನ್ನು ಎದುರಿಸಲಿದೆ ಎಂದು ನ್ಯೂಸ್‌ಲಾಂಡ್ರಿ ವೆಬ್‌ಸೈಟ್ ವರದಿ ಮಾಡಿದೆ. ವರದಿಯ ಪ್ರಕಾರ, ಪೈಲಟ್ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐಪಿಎಸಿ ಸೇವೆಗಳನ್ನು ಪಡೆಯಲು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅವರು ಸ್ವಂತ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಗುರುವಾರ ಪ್ರತಿಪಾದಿಸಿದೆ. ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಅಶೋಕ್ ಗೆಹ್ಲೋಟ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕಾಗಿ ತಮ್ಮ ಬೇಡಿಕೆಗಳಿಂದ ಹಿಂದೆ ಸರಿಯಲು ನಿರಾಕರಿಸಿದ ನಂತರ ಈ ಹೇಳೀಕೆಯು ಒಗ್ಗಟ್ಟಿ ಭಾಗವಾಗಿ ಬಂದಿದೆ.
ಬುಧವಾರದಂದು ತಮ್ಮ ಅಸೆಂಬ್ಲಿ ಕ್ಷೇತ್ರವಾದ ಟೋಂಕ್‌ನಲ್ಲಿ ಮಾಡಿದ ಭಾಷಣದಲ್ಲಿ ಪೈಲಟ್ ಅವರು ಹಿಂದಿನ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ಬಗ್ಗೆ ವಾಗ್ದಾಳಿ ನಡೆಸಿದರು. ರಾಜಸ್ತಾನ ಉದ್ಯೋಗ ಪರೀಕ್ಷೆ ಪತ್ರಿಕೆ ಸೋರಿಕೆಯಿಂದಾಗಿ ಸರ್ಕಾರಿ ಉದ್ಯೋಗ ಪರೀಕ್ಷೆಗಳು ರದ್ದಾದ ಕಾರಣ ಯುವಕರಿಗೆ ನ್ಯಾಯ ದೊರಕಿಸಿಕೊಡುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications