ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಉಷ್ಣಾಂಶ ಸಾಧ್ಯವಿಲ್ಲ: ಹವಾಮಾನ ಇಲಾಖೆ
ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ, ಇದು ವಿಶ್ವದ ಎರಡನೇ ಗರಿಷ್ಠ ಉಷ್ಣಾಂಶ ಎಂದೂ ಪರಿಗಣಿಸಲ್ಪಟ್ಟಿತ್ತು.
ಮುಂಬೈ, ಮಾರ್ಚ್ 30: ವಿಶ್ವದಲ್ಲಿಯೇ ಎರಡನೇ ಅತಿ ಗರಿಷ್ಠ ತಾಪಮಾನ ಹೊಂದಿರುವ ಪ್ರಾಂತ್ಯವಾಗಿ ಬುಧವಾರ ಕೆಲವಾರು ಮಾಧ್ಯಮಗಳಲ್ಲಿ ಬಿಂಬಿತವಾಗಿದ್ದ ಮಹಾರಾಷ್ಟ್ರದ ರಾಯಗಢದ ಜಿಲ್ಲೆಯ ಭೀರಾ ಗ್ರಾಮದ ಬಗ್ಗೆ ತಪ್ಪು ಮಾಹಿತಿ ಹರಿದಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ, ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ, ಇದು ವಿಶ್ವದ ಎರಡನೇ ಗರಿಷ್ಠ ಉಷ್ಣಾಂಶ ಎಂದೂ ಪರಿಗಣಿಸಲ್ಪಟ್ಟಿತ್ತು. ಈ ವಿಚಾರ ಹೊರಬೀಳುತ್ತಲೇ, ವಿಶ್ವದ ಎರಡನೇ ಅತಿ ಉಷ್ಣಾಂಶದ ಪ್ರದೇಶ ಭಾರತದಲ್ಲಿದೆ ಎಂದು ಅಂತರ್ಜಾಲ ಮಾಧ್ಯಮಗಳು ಪುಂಖಾನುಪುಂಖವಾಗಿ ವರದಿ ಮಾಡಿದವು.

ಆದರೆ, ಇಷ್ಟು ಅಗಾಧವಾದ ಉಷ್ಣಾಂಶ ಭೀರಾ ಗ್ರಾಮದಲ್ಲಿ ದಾಖಲಾಗಿರಲು ಸಾಧ್ಯವೇ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದ್ದು, ಇದೀಗ ಈ ವಿಚಾರದ ತನಿಖೆಗೆ ಮುಂದಾಗಿದೆ.
ಇಲಾಖೆ ಹೇಳೋದೇನು?
ಭಾರತೀಯ ಹವಾಮಾನ ಇಲಾಖೆಯು ಸೋಮವಾರ ದೇಶದ ಗರಿಷ್ಠ ಉಷ್ಣಾಂಶ ಸರಾಸರಿಯಾಗಿ 43 ಡಿಗ್ರಿ ಸೆಲ್ಸಿಯಸ್ ಎಂದು ಹೇಳಿತ್ತು. ಮಂಗಳವಾರ, ಇಲಾಖೆಗೆ ಸಾರ್ವಜನಿಕ ರಜೆ ಇದ್ದಿದ್ದರಿಂದ, ಮಂಗಳವಾರ ಯಾವುದೇ ಊರಿನಲ್ಲೂ ಉಷ್ಣಾಂಶ ದಾಖಲಾಗಿಲ್ಲ. ಆದರೆ, ಬುಧವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೇ 46.5 ಡಿಗ್ರಿ ಸೆಲ್ಸಿಯನ್ ಉಷ್ಣಾಂಶ ದಾಖಲಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಏಕೆಂದರೆ, ಭೀರಾದ ಅಕ್ಕಪಕ್ಕದ ಗ್ರಾಮಗಳಾದ ವಾರ್ಧಾ, ನಾಗ್ಬುರ ಹಾಗೂ ಚಂದ್ರಾಪುರಗಳಲ್ಲಿ 43 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಆದರೆ, ಭೀರಾದಲ್ಲಿ ಮಾತ್ರ ಸುತ್ತಲಿನ ಗ್ರಾಮಗಳಿಗಿಂತ ಸುಮಾರು 3 ಡಿಗ್ರಿ ಹೆಚ್ಚು ಉಷ್ಣಾಂಶ ದಾಖಲಾಗಲು ಸಾಧ್ಯವೇ ಇಲ್ಲ ಎನ್ನುವುದು ಹವಾಮಾನ ಇಲಾಖೆಯ ಅಧಿಕಾರಿಗಳ ವಾದ.
ಹಾಗಾಗಿ, ಉಷ್ಣಾಂಶ ಮಾಪಕದಲ್ಲಿ ಕೆಲವಾರು ತಾಂತ್ರಿಕ ದೋಷಗಳು ಅಥವಾ ಇನ್ಯಾವುದೇ ವಿಚಾರಗಳು ಇಂಥ ತಪ್ಪು ಗ್ರಹಿಕೆಗೆ ಕಾರಣವಾಗಿರಬಹುದೇ ಎಂದು ಅನುಮಾನಪಟ್ಟಿರುವ ಇಲಾಖೆಯು ಇದರ ಸತ್ಯಾಸತ್ಯತೆಯನ್ನು ಅರಿಯಲು ಮುಂಬೈನಲ್ಲಿರುವ ತನ್ನ ಕಚೇರಿಯಿಂದ ತಜ್ಞರೊಬ್ಬರನ್ನು ಅಧ್ಯಯನಕ್ಕಾಗಿ ಕಳುಹಿಸಲಾಗುವುದು ಎಂದು ತಿಳಿಸಿದೆ.












Click it and Unblock the Notifications